ಪುರಾತನ ಕಲ್ಯಾಣಿ ಪುನರ್ ನಿರ್ಮಾಣಕ್ಕೆ ಕ್ರಮ

MAJJANABHAVI
ಹರಪನಹಳ್ಳಿ ತಾಲೂಕಿನ ದೇವರ ತಿಮ್ಲಾಪುರ ಸಮೀಪದ ಮಜ್ಜನಬಾವಿ ದುರಸ್ತಿಗೊಳಿಸಲು ನರೇಗಾ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ತಾಂತ್ರಿಕ ಸಂಯೋಜಕ ಆರ್.ನಾಗರಾಜನಾಯ್ಕ, ತಾಂತ್ರಿಕ ಸಹಾಯಕ ಯೋಗೀಶ್ ಇತರರಿದ್ದರು.
Published on

ಹರಪನಹಳ್ಳಿ: ತಾಲೂಕಿನ ದೇವರ ತಿಮ್ಲಾಪುರ ಸಮೀಪದ ಪುರಾತನ ಪುಷ್ಕರಣಿ ಮಜ್ಜನಬಾವಿಯ ರಕ್ಷಣಾಗೋಡೆ ಪುನರ್ ನಿರ್ಮಾಣಕ್ಕೆ ತಾಲೂಕು ಪಂಚಾಯಿತಿ ನರೇಗಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಳೆದ ವರ್ಷ ಭಾರಿ ಮಳೆಗೆ ಪುಷ್ಕರಣಿಯ ಕಲ್ಲಿನಗೋಡೆ ಕುಸಿದಿದ್ದ ಬಗ್ಗೆ ‘ಐತಿಹಾಸಿಕ ಮಜ್ಜನಬಾವಿ ದುರಸ್ತಿಗೆ ಕಡೆಗಣೆ’ ಶಿರ್ಷಿಕೆಯಡಿ ವಿಜಯವಾಣಿ ಪತ್ರಿಕೆ ಜು.14ರಂದು ವರದಿ ಪ್ರಕಟಿಸಿತ್ತು.

ಇದನ್ನು ಗಮನಿಸಿದ ತಹಸೀಲ್ದಾರ್ ಶಿವಕುಮಾರ ಬಿರಾದಾರ ಹಾಗೂ ತಾಪಂ ಇಒ ಸೂಚನೆ ಮೇರೆಗೆ ತಾಪಂ ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್ ನೇತೃತ್ವದ ತಂಡ, ಐತಿಹಾಸಿಕ ಮಜ್ಜನಬಾವಿಗೆ ಜು.13ರಂದು ಭೇಟಿ ನೀಡಿ ಕಲ್ಲಿನ ಗೋಡೆ ಮರು ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಗೆ ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ಐತಿಹಾಸಿಕ ಬಾವಿಯ ಪುನರ್ ನಿರ್ಮಾಣಕ್ಕೆ ತಾಂತ್ರಿಕ ಸಿಬ್ಬಂದಿ, ವಿಶೇಷ ಪರಿಣಿತ ಕೂಲಿಕಾರರಿಂದ ಕಾಮಗಾರಿ ನಿರ್ವಹಿಸಲು ಕ್ರಮಕೈಗೊಳ್ಳಲಾಗುವುದು. ಬಾವಿಯಲ್ಲಿ ನೀರು ತುಂಬಿದ್ದು, ತಾತ್ಕಲಿಕವಾಗಿ ಅದನ್ನು ಹೊರ ಹಾಕಿ ಹೂಳು ತೆಗೆದು ಮೂರು ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ಹೇಳಿದರು.

ತಾಂತ್ರಿಕ ಸಂಯೋಜಕ ಆರ್.ನಾಗರಾಜನಾಯ್ಕ, ಐಸಿಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ತಾಂತ್ರಿಕ ಸಹಾಯಕ ಯೋಗೀಶ್, ಅಡವಿಹಳ್ಳಿ ಗ್ರಾಪಂ ಸದಸ್ಯ ಮಂಜುನಾಥ, ಪ್ರಸನ್ನ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net