

ತುಮಕೂರು: ವಿದ್ಯಾರ್ಥಿಗಳ ಸಾಧನೆಯ ಹಿಂದೆ ಪಾಲಕರ ಮತ್ತು ಅಧ್ಯಾಪಕರ ಶ್ರಮವಿರುತ್ತದೆ. ಇಂದಿನ ಪುರಸ್ಕಾರ ಮುಂದಿನ ನಿಮ್ಮಗಳ ಸಾಧನೆಗೆ ಪ್ರೇರಣೆಯಾಗಲಿ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ಹೇಳಿದರು.
ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಿಳಾ ಪದವಿ ಕಾಲೇಜು ಅಲುಮಿನಿ ಅಸೋಸಿಯೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಸ್ನೇಹ ಸಮ್ಮೀಲನ, ಪ್ರತಿಭಾ ಪುರಸ್ಕಾರ ಮತ್ತು ಸಾಮಾನ್ಯಸಭೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ರ್ಯಾಂಕ್ ಪಡೆದು, ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರೆ. ವಿದ್ಯಾರ್ಥಿಗಳ ಶ್ರಮದ ಜತೆಗೆ, ಬೋಧಕರು ಹಾಗೂ ಪಾಲಕರ ಪ್ರೋತ್ಸಾಹ ಸಹ ಮುಖ್ಯವಾಗಿದೆ ಎಂದರು.
ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಅಲುಮಿನಿ ಅಸೋಸಿಯೇಷನ್ನಲ್ಲಿ ಸುಮಾರು 18 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅವರೆಲ್ಲನ್ನು ಸಂಪರ್ಕಿಸಿ ಇಂತಹ ಕಾರ್ಯಕ್ರಮ ಮಾಡುವುದರಿಂದ ಹೊಸ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಹಳೆಯ ವಿದ್ಯಾರ್ಥಿಗಳಿಂದ ವಂತಿಗೆ ಸಂಗ್ರಹಿಸಿ, ಸಂಘ ನಡೆಸುವುದು ಒಂದೆಡೆಯಾದರೆ, ಅವರಲ್ಲಿರುವ ಪ್ರತಿಭೆಯನ್ನು ಹಾಲಿ ಇರುವ ವಿದ್ಯಾರ್ಥಿಗಳಿಗೆ ಪರಿಚಯಿಸಿ, ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿದವರ ಅನುಭವ, ಮಾಹಿತಿ ವಿನಿಯೋಗಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶ್ರೀ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಅಲುಮಿನಿ ಬಳಗ ದೇಶ ವಿದೇಶಗಳಲ್ಲಿ ಇದೆ. ಮುಂದಿನ ಮೇ ನಲ್ಲಿ ದುಬೈನಲ್ಲಿ ಎಸ್ಐಟಿ ಅಲುಮಿನಿ ಸಭೆ ಇದೆ. ಕಳೆದ ವರ್ಷ ನ್ಯೂಜರ್ಸಿನಲ್ಲಿ ನಡೆದಿತ್ತು. ಅದೇ ರೀತಿ ಪದವಿ ಕಾಲೇಜುಗಳ ಪ್ರಾಂಶುಪಾಲರು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಉದ್ಯೋಗ ಅಥವಾ ಕಾರ್ಯನಿಮಿತ್ತ ನೆಲೆಸಿರುವ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರಿಂದ ವಿಶೇಷ ಉಪನ್ಯಾಸ, ಕೌಶಲ ತರಬೇತಿ ಕೊಡಿಸುವ ಮೂಲಕ ಮಕ್ಕಳಲ್ಲಿ ಹೆಚ್ಚಿನ ಸಾಧನೆಗೆ ಸ್ಫೂರ್ತಿ ತುಂಬಬೇಕು ಎಂದರು.
ಬೆಂಗಳೂರಿನ ಸಿವಿಲ್ ಜಡ್ಜ್ ನಿಶಾರಾಣಿ ಮಾತನಾಡಿ, ಎಲ್ಲ ಕ್ಷೇತ್ರದಲ್ಲಿ ಸಮಸ್ಯೆಗಳಿದ್ದಂತೆ ಮಹಿಳೆಯರಿಗೂ ಸಾಧನೆಗೆ ಅಡ್ಡಿಯಾಗುವಂತಹ ಹಲವರು ಅಡೆತಡೆಗಳಿವೆ. ಹಾಗೆಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು ಅದರ ಪರಿಹಾರದ ಕಡೆಗೆ ನಾವುಗಳು ಗಮನಹರಿಸಬೇಕಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೂ, ಸಾಮಾನ್ಯ ಶಿಕ್ಷಣದ ವಿದ್ಯಾರ್ಥಿಗಳಿಗೂ ಸಾಕಷ್ಟು ವೆತ್ಯಾಸವಿದೆ ಎಂದರು.
ಇಂಜಿನಿಯರಿಂಗ್ ಓದುವ ಮಕ್ಕಳಿಗೆ ಕಟ್ಟಲೆಗಳು ಕಡಿಮೆ. ಬಿಎ, ಬಿ.ಕಾಂ, ಬಿಎಸ್ಸಿ ಪದವಿ ವಿದ್ಯಾರ್ಥಿಗಳು, ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಡೆತಡೆಗಳು ಹೆಚ್ಚು. ಹಾಗಾಗಿ, ಅಲುಮಿನಿಯಂತಹ ಕಾರ್ಯಕ್ರಮಗಳಲ್ಲಿ ಹೆಣ್ಣುಮಕ್ಕಳು ಭಾಗವಹಿಸುವುದು ಕಡಿಮೆ ಎಂದರು.
ಹಿರಿಯ ವಿದ್ಯಾರ್ಥಿನಿಯರ ಸಂಘದ ಮಾಜಿ ಉಪಾಧ್ಯಕ್ಷೆ ಸಹನಾ ದೊಡ್ಡಮನಿ ಮಾತನಾಡಿ, ವಿದ್ಯಾರ್ಥಿನಿಯರು ಶಾಲಾ, ಕಾಲೇಜು ದಿನಗಳಲ್ಲಿ ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿದರೆ, ಜೀವಿತದ ಕೊನೆಯವರೆಗು ಅವರೊಂದಿಗೆ ತಮ್ಮ ಕಷ್ಟ, ಸುಖಗಳನ್ನ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಲು ಸಾಧ್ಯವಿದೆ. ಓದಿ ದೂರದ ಊರಿನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ, ತಮ್ಮ ಶಾಲಾ ಕಾಲೇಜಿನ ಸಹಪಾಠಿ ಸಿಕ್ಕರೆ ಮರಳುಗಾಡಿನಲ್ಲಿ ನೀರು ಸಿಕ್ಕಂತೆ ಭಾಸವಾಗುತ್ತದೆ ಎಂದರು.
ಪ್ರಾಚಾರ್ಯ ಡಾ.ದಕ್ಷಿಣಮೂರ್ತಿ ಮಾತನಾಡಿ, ಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಜನರ ನಿರೀಕ್ಷೆ ಇತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಹೆಚ್ಚಿನ ಜನರು ಬರುವಂತೆ ಮಾಡಲಿದ್ದೇವೆ. ಹೆಣ್ಣು ಮಕ್ಕಳಿಗೆ ವಯುಕ್ತಿಕ ಜೀವನದ ಒತ್ತಡದಲ್ಲಿ ಇರುತ್ತಾರೆ. ಅಲುಮಿನಿ ಕಾರ್ಯಕ್ರಮಗಳನ್ನು ಸದಸ್ಯರೆಲ್ಲರಿಗೂ ತಿಳಿಸುವ ಕೆಲಸ ಮಾಡುತ್ತೇವೆ ಎಂದರು. ವೇದಿಕೆಯಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪದವಿ ಕಾಲೇಜುಗಳ ಸಂಯೋಜನಾಧಿಕಾರಿ ಡಾ.ಡಿ.ಎನ್.ಯೋಗೀಶ್ವರಪ್ಪ, ಅಲುಮಿನಿ ಸಂಘದ ಪದಾಧಿಕಾರಿಗಳು ಇದ್ದರು.
ಸಿದ್ಧಗಂಗಾ ಸ್ವಾಮೀಜಿಗಳಿಗೆ ಇಡೀ ವಿಶ್ವದಲ್ಲಿಯೇ ಗೌರವವಿದೆ. ಕೆಲ ಹುದ್ದೆಗಳ ಸಂದರ್ಶನಕ್ಕೆ ಹೋದಂತಹ ಸಂದರ್ಭದಲ್ಲಿ ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿ ಎಂದಾಗ ನಮ್ಮಿಂದ ಹೆಚ್ಚಿನ ಶಿಸ್ತು, ಸಮಯ ಪ್ರಜ್ಞೆ ಬಯಸುತ್ತಾರೆ. ಹಾಗಾಗಿ, ಸಮಯಕ್ಕೆ ಹೆಚ್ಚಿನ ಬೆಲೆ ನೀಡಬೇಕು. ಹಿರಿಯರಿಗೆ ಗೌರವ ನೀಡಬೇಕು.| ನಿಶಾರಾಣಿ ನ್ಯಾಯಾಧೀಶೆ, ಬೆಂಗಳೂರು