

ಆನೇಕಲ್: ಆನೇಕಲ್ ಪುರಸಭೆಯಿಂದ 24 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಗೆ ಚಿತಾಗಾರ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಿಸುವ ಮೂಲಕ ಚಿತಾಗಾರದ ಸಮಸ್ಯೆಗೆ ಪರಿಹರ ಕಲ್ಪಿಸಲಾಗಿದೆ ಎಂದು ಶಾಸಕ ಬಿ. ಶಿವಣ್ಣ ಹೇಳಿದರು.
ಹಿಂದು ರುದ್ರಭೂಮಿಯಲ್ಲಿ ಕಟ್ಟಿಗೆ ಚಿತಾಗಾರ ಮತ್ತು ಕೊಠಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರ ಕುಂದುಕೊರತೆ ಆಲಿಸಲು ಗ್ರಾಮಸಭೆ ಆಯೋಜಿಸಲಾಗುತ್ತಿದೆ. ಇಲಾಖೆಗಳಲ್ಲಿ ಸಿಗುವ ವಿವಿಧ ಸೌಲಭ್ಯಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಗುತ್ತದೆ. ಆದರೆ ಆನೇಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಸಭೆಗಳಿಗೆ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಆನೇಕಲ್ ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ್ ಮಾತನಾಡಿ, ಪ್ರತಿಯೊಬ್ಬರ ಪಾಲಿಗೆ ರುದ್ರಭೂಮಿ ಕಟ್ಟಕಡೆಯ ಜಾಗ. ಚಿತಾಗಾರದ ಸಮಸ್ಯೆ ನೀಗಿಸಲು ಮುಂದಾಗಿದ್ದೇನೆ. ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಬಂದಾಗ ಮಳೆಯಾದರೆ ತುಂಬಾ ತೊಂದರೆಯಾಗುತ್ತಿತ್ತು. ಇದರಿಂದಾಗಿ ಅಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇನೆ. ರಾಜಸ್ಥಾನಿ ಸಮಾಜದವರು ಕೊಠಡಿ ನಿರ್ಮಿಸಿಕೊಡಲು ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸದಸ್ಯರಾದ ಮುನಾವರ್, ಮಹಾಂತೇಶ್, ಶ್ರೀನಿವಾಸ್, ರಾಜಪ್ಪ, ರವಿ ಚೇತನ್, ರವಿ, ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ್, ರಾಜಸ್ಥಾನಿ ಸಮಾಜದ ಮುಖಂಡ ಹರಿಸಿಂಗ್ ಮತ್ತಿತರರಿದ್ದರು.