ಪುರಸಭೆಯಲ್ಲಿ ಬಜೆಟ್ ಪೂರ್ವಬಾವಿ ಸಭೆ.

ಪುರಸಭೆಯಲ್ಲಿ ಬಜೆಟ್ ಪೂರ್ವಬಾವಿ ಸಭೆ.
Published on

ಬೇಲೂರು: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಸಿ.ಎನ್,ದಾನಿ ಅಧ್ಯಕ್ಷತೆಯಲ್ಲಿ ಗುರುವಾರ ಕರೆಯಲಾಗಿದ್ದ 2023-24ನೇ ಸಾಲಿನ ಅಯವ್ಯಯ ತಯಾರಿಕೆಯ ಬಜೆಟ್ ಪೂರ್ವಬಾವಿ ಸಭೆಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆ ಪದಾಧಿಕಾರಿಗಳು ಆಗಮಿಸದೆ ಕೇವಲ ಪುರಸಭೆ ಸದಸ್ಯರಿಗಾಗಿ ಸಭೆ ನಡೆಸಿದ ಘಟನೆ ನಡೆಯಿತು.


ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆರಳೆಣಿಕೆಯಷ್ಟಿದ್ದ ಸಾರ್ವಜನಿಕರು ಹಾಗೂ ಪುರಸಭೆ ಸದಸ್ಯರೆ ಬಜೆಟ್‌ನಲ್ಲಿ ಸೇರಿಸಬೇಕಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.


ಬಜೆಟ್ ಪೂರ್ವ ಬಾವಿ ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಪುರಸಭೆ ಸದಸ್ಯ ಜಿ.ಶಾಂತಕುಮಾರ್, ಸಾರ್ವಜನಿಕರು ಪುರಸಭೆಗೆ ಬರುವ ಅನುದಾನವನ್ನು ಗಮನದಲ್ಲಿಟ್ಟು ಕೊಂಡು ಸಲಹೆ ನೀಡಬೇಕಿದೆ. ಪಟ್ಟಣದ ಜನತೆಗೆ ತೊಂದರೆಯಾಗುತ್ತಿದ್ದ ಹೊಳೆ ಬೀದಿಯ ಭಸ್ಮೀಕರಣ ಹೊಂಡವನ್ನು 15 ಕೋಟಿ ರೂ, ವೆಚ್ಚದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಜತೆಗೆ ಪಟ್ಟಣ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗುವುದು. ವಿಷ್ಣು ಸಮುದ್ರ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಸುಸಜ್ಜಿತ ಉದ್ಯಾನವನ ಸೇರಿದಂತೆ ಬೇಲೂರು ಪ್ರವಾಸಿ ಕೇಂದ್ರವಾದ ಹಿನ್ನೆಲೆಯಲ್ಲಿ ಹಾಗೂ ಜನತೆಯ ಆರೋಗ್ಯದ ದೃಷ್ಟಿಯಿಂದ ವೈಜ್ಞಾನಿಕ ಉಪಕರಣಗಳು, ಯಂತ್ರಗಳನ್ನು ಬಳಸಿ ಸ್ವಚ್ಛತೆ ಕಾಪಾಡಲು ಮುಂದಾಗುವುದಾಗಿ ಹೇಳಿದರು.


ಸಮಾಜಿಕ ಕಾರ್ಯಕರ್ತ ನೂರ ಅಹಮದ್ ಮಾತನಾಡಿ, ರಸ್ತೆ ಬದಿ ವ್ಯಾಪಾರಿಗಳಿಗೆ ಸಿಬ್ಬಂದಿ ದರ್ಪ ತೋರಿಸುತ್ತಿದ್ದಾರೆ. ಪುರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ, ಬೇಕಾದರೆ ದಾಖಲೆ ನೀಡುತ್ತೇನೆ. ಸಾರ್ವಜನಿಕರ ಕುಂದು ಕೊರತೆಗಳಿಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದನ್ನು ತಡೆಯಬೇಕು. ಸಾರ್ವಜನಿಕರು ಕೆಲಸ ಮಾಡಿಸಲು ಪ್ರತಿದಿನ ಪುರಸಭೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ಶೌಚಗೃಹಗಳ ಕೊರತೆ ಇದೆ. ಶಿವರಾತ್ರಿಗೆಂದು ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರು ಪರದಾಡುವಂತ್ತಾಗಿದ್ದು, ಶೌಚಗೃಹ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಕ್ರಮಕೈಗೊಳ್ಳಿ ಎಂದರು.


ಪುರಸಭಾ ಮಾಜಿ ಅಧ್ಯಕ್ಷೆ ಮುದ್ದಮ್ಮ ಮಾತನಾಡಿ, 13ನೇ ವಾರ್ಡಿನಲ್ಲಿ ರಸ್ತೆ ನಿರ್ಮಾಣವಾಗದೆ ಓಡಾಡಲು ತೊಂದರೆಯಾಗಿದೆ. ಜತೆಗೆ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.


ಬಳಕೆದಾರರ ವೇದಿಕೆ ತಾಲೂಕು ಕಾರ್ಯದರ್ಶಿ ಸುಲೇಮಾನ್ ಮಾತನಾಡಿ, ಕಳೆದ 15 ವರ್ಷಗಳಿಂದ ಮುಖ್ಯರಸ್ತೆ ವಿದ್ತರಣೆಗಾಗಿ ಒತ್ತಾಯಿಸಿದರೂ ಕ್ರಮ ಕೈಗೊಂಡಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಹೊದ ನಗರದಲ್ಲಿನ ರಸ್ತೆ ಅಭಿವೃದ್ಧಿಗೆ ಪೂರಕವಾಗಿ ಬಜೆಟ್‌ನಲ್ಲಿ ಸೇರಿಸಿ, ನೀರಿನ ವ್ಯವಸ್ಥೆ ಮಾಡಿಸುವ ಮೂಲಕ ಬೇಲೂರಿನ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದರು.


ಸದಸ್ಯ ಎ.ಆರ್.ಅಶೋಕ್ ಮಾತನಾಡಿ, ಮುಖ್ಯರಸ್ತೆ ವಿದ್ತರಣೆಗೆ ಪುರಸಭೆ ಮುಂದಾಗಿದೆ. ಆದರೆ ಶಾಸಕರು ಗಮನ ಹರಿಸಬೇಕಿದೆ. ಅಲ್ಲದೆ ಪುರಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಶಾಸಕರು ಕೂಡ ಪುರಸಭೆಯೊಂದಿಗೆ ಕೈಜೋಡಿಸಿ ಪಟ್ಟಣವನ್ನು ಜಗತ್ತೆ ತಿರುಗಿ ನೋಡುವಂತೆ ಮಾಡಲು ಮುಂದಾಗಬೇಕು ಎಂದರು.


ತಾಲೂಕು ಕಸಾಪ ಕಾರ್ಯದರ್ಶಿ ಬಿ.ಬಿ.ಶಿವರಾಜು ಮಾತನಾಡಿ, ಈ ಹಿಂದೆ ಬಜೆಟ್ ಸಭೆಗಳಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿ ಸಲಹೆ ಸೂಚನೆಗಳನ್ನು ಮತ್ತು ಅಭಿವೃದ್ಧಿಗೆ ಬೇಕಾದ ತಮ್ಮ ಅಭಿಪ್ರಾಯ ಹೇಳುತ್ತಿದ್ದರು. ಜತೆಗೆ ಪುರಸಭೆ ಮುಂಭಾಗದ ಆವರಣದಲ್ಲಿ ಬಜೆಟ್ ಪೂರ್ವಭಾವಿ ಸಭೆ ಮಾಡಲಾಗುತ್ತಿತ್ತು. ಆದರೆ ಈ ಸಭೆ ಬಗ್ಗೆ ಸರಿಯಾಗಿ ಯಾರಿಗೂ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ಸದಸ್ಯರು ಬಿಟ್ಟರೆ ಬೇರೆಯವರು ಬರಲು ಸಾಧ್ಯವಾಗಿಲ್ಲ. ಮುಂದಿನ ಸಭೆಗೂ ಮೊದಲು ಹೆಚ್ಚು ಪ್ರಚಾರ ಮಾಡಿ ಜನತೆಯ ಸಲಹೆ ಸೂಚನೆಯಂತೆ ಪಟ್ಟಣದ ಅಭಿವೃದ್ಧಿಗೆ ಮುಂದಾಗಿ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ, ಪಟ್ಟಣದ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಪತ್ರ ಬರೆದು ತಿಳಿಸಲಾಗಿದೆ. ಮತ್ತು ಪುರಸಭೆಯ ಎಲ್ಲ ಮಾಜಿ ಅಧ್ಯಕ್ಷರು, ಸದಸ್ಯರಿಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಆದರೂ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಸಲಹೆ ನೀಡಲು ಆಗಮಿಸಿಲ್ಲ. ಈಗಾಗಲೇ ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಹಳೇಬೀಡು ರಸ್ತೆಯಿಂದ ಹೊಸ ನಗರಕ್ಕೆ ಡಾಬರ್ ರಸ್ತೆ ನಿರ್ಮಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಪಟ್ಟಣದ ಸೌಂದರ್ಯಕ್ಕೆ ದಕ್ಕೆ ತರುತಿದ್ದ ಹಿನ್ನೆಲೆಯಲ್ಲಿ ತರವುಗೊಳಿಸಿ, ಅವರಿಗೆ ಪ್ರತ್ಯೇಕವಾಗಿ ಫುಡ್ ಕೋರ್ಟ್ ನಿರ್ಮಿಸಲಾಗುವುದು. ಹಾಗೂ ಪುರಸಭೆಯಿಂದ ಮಾದರಿ ಬಜೆಟ್ ಮಂಡಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಮತ್ತೂಂದು ಬಜೆಟ್ ಪೂರ್ವಭಾವಿ ಸಭೆಗೆ ಎಲ್ಲರನ್ನು ಕರೆದು ಚರ್ಚಿಸಲಾಗುವುದು ಎಂದರು.


ಪುರಸಭೆ ಉಪಾಧ್ಯಕ್ಷೆ ಉಷಾ, ಸದಸ್ಯರಾದ ಜಮಾಲೂದ್ದೀನ್, ಆಶೊಕ್, ಪೈಂಟ್ ರವಿ, ಭಾರತ್, ಮುಖ್ಯಾಧಿಕಾರಿ ಸುಜಯ್ ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net