ಗುಂಡ್ಲುಪೇಟೆ: ಪಟ್ಟಣದ ಪುರಸಭೆಗೆ ನೂತನ ಅಧ್ಯಕ್ಷಮ ಉಪಾಧ್ಯಕ್ಷರಾಗಿ ಕ್ರಮವಾಗಿ ಶಶಿಧರ್ (ದೀಪು), ಕಪ್ಪಣ್ಣ ಅವಿರೋಧ ಆಯ್ಕೆಯಾದರು.
ಕಾಂಗ್ರೆಸ್ ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಜಿ.ಎಸ್.ಮಧುಸೂದನ್ ಹಾಗೂ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಎರಡೂ ಸ್ಥಾನಗಳಿಗೆ ಇಬ್ಬರನ್ನು ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವಿರೋಧ ಆಯ್ಕೆ ಘೋಷಿಸಿದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಶಾಸಕ ಎಚ್.ಎಂ.ಗಣೇಶ ಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್.ಮಹೇಶ್, ಪುರಸಭೆ ಸದಸ್ಯರು ಅಭಿನಂದಿಸಿದರು.