

ಹೊಳೆನರಸೀಪುರ: ಪಟ್ಟಣದ ಪುರಸಭೆಯಲ್ಲಿ ಗುರುವಾರ ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ದಿಢೀರ್ ಮುಂದೂಡಲಾಗಿದೆ.
ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ ಅವರನ್ನು ಸಾಮಾನ್ಯ ಸಭೆ ಮುಂದೂಡಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗುರುವಾರ ಸಾಮಾನ್ಯ ಸಭೆ ನಡೆಸಬೇಕಿತ್ತು. ಸಾಮಾನ್ಯ ಸಭೆ ನಡೆಸುವುದಾಗಿ ಸದಸ್ಯರೆಲ್ಲರಿಗೂ ಅಜೆಂಡಾದ ಪ್ರತಿಯನ್ನು ಕಳುಹಿಸಿಕೊಡಲಾಗಿತ್ತು. ಆದರೆ ಅಜೆಂಡಾದಲ್ಲಿ ಕೆಲವು ವಿಷಯಗಳನ್ನು ಕೈ ಬಿಟ್ಟಿದ್ದರಿಂದ ಈ ಸಭೆಯನ್ನು ಮುಂದೂಡಲಾಗಿದೆ ಎಂದು ಸಮಜಾಯಿಸಿ ನೀಡಿದ್ದಾರೆ.
ಅಧ್ಯಕ್ಷರು ಸಾಮಾನ್ಯ ಸಭೆ ದಿನಾಂಕ ಗುರುತಿಸುವ ಮೊದಲು ಅಜೆಂಡಾದಲ್ಲಿ ಮತ್ತ್ಯಾವುದಾದರೂ ಪಟ್ಟಣದ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಸೇರಿಸಬೇಕೆ ಎಂಬುದನ್ನು ಕಚೇರಿಯ ಸಿಬ್ಬಂದಿಯೊಂದಿಗೆ ಚರ್ಚಿಸದೆ ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಪಟ್ಟಣದ ನಾಗರಿಕರಲ್ಲಿ ವ್ಯಕ್ತವಾಗಿದೆ.
ಕಳೆದ ಸಾಮಾನ್ಯ ಸಭೆಯನ್ನು ಅಧ್ಯಕ್ಷರು ಶಾಸಕರಿಲ್ಲದೆ ಗುಪ್ತವಾಗಿ ಸಭೆ ನಡೆಸಿದ್ದರು.
ಇಂದು ಶಾಸಕರು ಊರಿನಲ್ಲಿ ಇದ್ದರೂ ಈ ಸಭೆಯನ್ನು ಮುಂದೂಡಿರುವುದೇಕೆ ಎಂಬ ಹತ್ತಾರು ಪ್ರಶ್ನೆಗಳು ಉದ್ಭವಗೊಂಡಿವೆ.
ಶಾಸಕರಿಲ್ಲದೆ ಪುರಸಭೆಯಲ್ಲಿ ಮೊದಲ ಕೌನ್ಸಿಲರ್ ಸಭೆ ಮಾಡಿದ ಕೀರ್ತಿ ಎಚ್.ಕೆ.ಪ್ರಸನ್ನ ಅವರಿಗೆ ಸಲ್ಲುತ್ತದೆ. ಏಕೆಂದರೆ ಪುರಸಭೆಯ ಯಾವುದೇ ಸಭೆ ಸಮಾರಂಭ ನಡೆಯಬೇಕಾದರೆ ಶಾಸಕರು ಒಂದು ದಿನಾಂಕ ಗುರುತಿಸಿ ಮುಹೂರ್ತ ಫಿಕ್ಸ್ ಮಾಡಿರುತ್ತಾರೆ. ಇಂದು ನಡೆಯಬೇಕಿದ್ದ ಸಭೆಯನ್ನು ಸಹ ಶಾಸಕರೇ ಫಿಕ್ಸ್ ಮಾಡಿರುತ್ತಾರೆ. ಇವರ ಅನುಮತಿ ಇಲ್ಲದೆ ಯಾವ ಕೆಲಸ ಕಾರ್ಯಗಳು ನಡೆಯುವುದಿಲ್ಲ.
ಸಾಮಾನ್ಯ ಸಭೆಗೆ ಶಾಸಕರು ಹಾಜರಾಗಬೇಕೆಂದಿಲ್ಲ ಪುರಸಭೆ ಅಧ್ಯಕ್ಷರು ಸಭೆಯನ್ನು ನಡೆಸಬಹುದಿತ್ತು. ಕಳೆದ ತಿಂಗಳು ಶಾಸಕರಿಲ್ಲದೆ ಸಭೆ ನಡೆಸಿರುವುದು ತಿಳಿದ ವಿಷಯ.
ಸಭೆಯನ್ನು ಮುಂದೂಡಲು ಕೆಲವು ಕಾರಣಗಳು ಇರಬಹುದೇನೋ . ಗುರುವಾರ ನಡೆಯಬೇಕಿದ್ದ ಪುರಸಭೆಯ ಕಾಯ್ದೆ ಪ್ರಕಾರ ಕಲಂ 49(4)ರ ಅನ್ವಯ ಸಾಮಾನ್ಯ ಸಭೆ ವೀಕ್ಷಣೆ ಕೋರಿ ಬಾಗಿವಾಳು ಮಂಜೇಗೌಡ ಮತ್ತು ಆರ್‌ಟಿಐ ಕಾರ್ಯಕರ್ತ ಮುತ್ತುರಾಜ್ ಅವರು ಪುರಸಭೆಯಲ್ಲಿ ಅನುಮತಿ ಕೋರಿದ್ದರು
ಪುರಸಭೆಯ ಕಾಂಗ್ರೆಸ್ ಸದಸ್ಯ ಬೈರಶೆಟ್ಟಿ ಅವರು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಾಮಾನ್ಯ ಸಭೆ ನಡೆಸುವ ಕುರಿತು 7 ದಿನ ಮುಂಚಿತವಾಗಿ ನನಗೆ ಅಜೆಂಡಾ ಪ್ರತಿಯನ್ನು ಕೊಡಬೇಕಿತ್ತು. ಆದರೆ ಪುರಸಭೆಯಲ್ಲಿ ಸಾಮಾನ್ಯ ಸಭೆ ನಡೆಯುವ ಒಂದು ದಿನ ಮುಂಚಿತವಾಗಿ ಕೊಟ್ಟಿದ್ದಾರೆ ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದರು. ಹಾಗೂ ಪುರಸಭೆಯ ಮುಂಭಾಗದಲ್ಲಿ ಇದನ್ನು ಖಂಡಿಸಿ ಧರಣಿ ಕೂರುವುದಾಗಿ ಮಾಧ್ಯಮದವರಿಗೆ ತಿಳಿಸಿದ್ದರು.
ಗುರುವಾರ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಸಭೆಗೆ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಅವರು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ಹಮ್ಮಿಕೊಂಡಿದ್ದರು ಈ ಸಭೆಗೆ ಪುರಸಭೆ ಮುಖ್ಯಾ ಅಧಿಕಾರಿಯನ್ನು ಆಹ್ವಾನಿಸಿದ್ದರು. ಸಾಮಾನ್ಯ ಸಭೆಗೆ ಮುಖ್ಯ ಅಧಿಕಾರಿಗಳು ಇಲ್ಲ ಎಂಬ ಕಾರಣವೊಡ್ಡಿ ಈ ಸಭೆಯನ್ನು ಮುಂದೂಡಿರಬಹುದಾ? ಎಂಬ ವಿಷಯಗಳನ್ನು ಸಾರ್ವಜನಿಕರು ಹೊರ ಹಾಕಿದ್ದಾರೆ.