

ಕುಣಿಗಲ್ : 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರನಿಗೆ ಬಿಲ್ ಪಾವತಿ ವಿಚಾರವಾಗಿ ಪುರಸಭೆ ಮಾಜಿ ಅಧ್ಯಕ್ಷ ಎಸ್.ಕೆ.ನಾಗೇಂದ್ರ ಹಾಗೂ ಹಾಲಿ ಅಧ್ಯಕ್ಷ ರಂಗಸ್ವಾಮಿ ನಡುವೆ ಬುಧವಾರ ಸಾಮಾನ್ಯ ಸಭೆಯಲ್ಲಿ ಜಟಾಪಟಿ ನಡೆಯಿತು.
ಹಿಂದಿನ ಸಭೆಯ ನಡಾವಳಿ ಓದಿ ರೆಕಾರ್ಡ್ ಮಾಡುವ ವೇಳೆ ಪುರಸಭೆ ನೂತನ ಕಟ್ಟಡದ ಕಾಂಪೌಂಡ್ ಹಾಗೂ ಗೇಟ್ ನಿರ್ಮಾಣ ಕಾಮಗಾರಿಗೆ 15ನೇ ಹಣಕಾಸು ಯೋಜನೆಯ ಅನುದಾನದ ಹಣದಲ್ಲಿ ಬಿಲ್ ಪಾವತಿ ವಿಚಾರ ಪ್ರಸ್ತಾಪವಾದಾಗ ಬಿಜೆಪಿ ಸದಸ್ಯ ಕೃಷ್ಣ ಮಾತನಾಡಿ, ಪುರಸಭೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 5 ಕೋಟಿ ರೂ. ಅನುದಾನ ಬಂದಿದೆ. ಕಾಮಗಾರಿ ಕ್ರಿಯಾಯೋಜನೆಯಲ್ಲಿ ಕಾಂಪೌಂಡ್, ಸಂಪ್, ಗೇಟ್ ಸೇರಿ ಇನ್ನೂ ಅನೇಕ ಕಾಮಗಾರಿಗಳು ಸೇರಿಕೊಂಡಿವೆ. ಆದರೆ ಗುತ್ತಿಗೆದಾರ ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ. ಜತೆಗೆ ಕಾಂಪೌಂಡ್ ನಿರ್ಮಾಣ ಹಾಗೂ ಗೇಟ್ ಅಳವಡಿಕೆ ಕಾಮಗಾರಿಗೆ ಯೋಜನೆಯ ಅನುದಾನದಲ್ಲಿ 12 ಲಕ್ಷ ರೂ.ಬಿಲ್ ಪಾವತಿ ಮಾಡುವಂತೆ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಅಧಿಕಾರಿಗಳೇ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಈಗ ಅನುಮತಿ ಪಡೆಯಲು ಸಭೆಯ ಮುಂದಿಟ್ಟಿದ್ದಾರೆ. ಸರ್ಕಾರದ 5 ಕೋಟಿ ರೂ.ಅನುದಾನದಲ್ಲಿ ಈ ಕಾಮಗಾರಿಯೂ ಸೇರಿರುವಾಗ ಪುರಸಭೆಯ ಹಣದಲ್ಲಿ ಏಕೆ ಬಿಲ್ ನೀಡಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ಪುರಸಭೆ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಪುರಸಭೆ ಕಟ್ಟಡ ನಿರ್ಮಾಣ ಮಾಡಿರುವ ಗುತ್ತಿಗೆದಾರ ಹಲವು ಕಾಮಗಾರಿಗಳನ್ನೇ ಪೂರ್ಣಗೊಳಿಸಿಲ್ಲ. ಪೂರ್ಣಗೊಳಿಸುವಂತೆ ಸೂಚಿಸಿದರೂ ಗುತ್ತಿಗೆದಾರನೇ ಆಗಮಿಸಿಲ್ಲ. ಸಭೆಯ ಒಪ್ಪಿಗೆ ಪಡೆಯದೆ ಅಧಿಕಾರಿಗಳೇ 15 ಹಣಕಾಸು ಯೋಜನೆ ಅನುದಾನದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ 12 ಲಕ್ಷ ರೂ. ಹಣ ಮೀಸಲಿಟ್ಟು ಕ್ರಿಯಾಯೋಜನೆ ತರಿಸಿಕೊಂಡಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ಅನುಮೋದನೆ ನೀಡಿಲ್ಲ. ಈಗ ಬಿಲ್ ಪಾವತಿ ಸಾಧ್ಯವಿಲ್ಲ ಎಂದರು.
ನನ್ನ ಅವಧಿಯಲ್ಲಿ ಪುರಸಭೆ ಕಟ್ಟಡದ ಕಾಂಪೌಂಡ್ ನಿರ್ಮಾಣ ಮಾಡಿದ್ದೇನೆಯೇ ಹೊರತು ಸ್ವಂತ ಕಾಮಗಾರಿ ಮಾಡಿಕೊಂಡಿಲ್ಲ. ಅಧಿಕಾರಿಗಳು 15ನೇ ಹಣಕಾಸು ಯೋಜನೆಯಲ್ಲಿ ಹಣ ಇದೆ ಎಂದು ತಿಳಿಸಿದರು. ಅದಕ್ಕೆ ನಾನು ಕಾಂಪೌಂಡ್ ಕಾಮಗಾರಿಗೆ ಕ್ರಿಯಾ ಯೋಜನೆ ತಯಾರಿಸಲು ತಿಳಿಸಿದ್ದೇನೆ ಎಂದು ಮಾಜಿ ಅಧ್ಯಕ್ಷ ಎಸ್.ಕೆ.ನಾಗೇಂದ್ರ ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಕಟ್ಟಡ ನಿರ್ಮಾಣ ಕ್ರಿಯಾಯೋಜನೆಯಲ್ಲೇ ಕಾಂಪೌಂಡ್ ನಿರ್ಮಾಣವೂ ಸೇರಿರುವುದರಿಂದ ಗುತ್ತಿಗೆದಾರ ಸರ್ಕಾರದಿಂದ ಬಿಲ್ ಪಾವತಿ ಮಾಡಿಕೊಳ್ಳಲಿ, ಪುರಸಭೆಯಿಂದ ಬಿಲ್ ಪಾವತಿ ಮಾಡುವುದು ಬೇಡ ಎಂದು ಪಟ್ಟು ಹಿಡಿದರು. ಈ ವೇಳೆ ರಂಗಸ್ವಾಮಿ ಹಾಗೂ ನಾಗೇಂದ್ರ ನಡುವೆ ಮಾತಿನ ಚಕಮಕಿ ನಡೆಯಿತು.
ಪುರಸಭೆ ಉಪಾಧ್ಯಕ್ಷೆ ತಬಸಮ್ ಉನ್ನಿಸಾ, ಸದಸ್ಯ ರಾಮಣ್ಣ, ಪ್ರಭಾರ ಮುಖ್ಯಾಧಿಕಾರಿ ದೇವರಾಜು, ಇಂಜಿನಿಯರ್ ಡಿ.ಎಸ್ ಬಿಂಧು ಕುಮಾರ್, ಪರಿಸರ ಇಂಜಿನಿಯರ್, ಆರ್ ಐ ಹನುಮಂತರಾಜು ಹಾಜರಿದ್ದರು.
ಪೌರ ಕಾರ್ಮಿಕರಿಗೆ ಗುಣಮಟ್ಟದ ಆಹಾರ : ಪೌರ ಕಾರ್ಮಿಕರಿಗೆ ಗುಣಮಟ್ಟದ ಆಹಾರ ನೀಡುವಂತೆ ಸದಸ್ಯರು ಆಗ್ರಹಿಸಿದರು. ಹಾಲಿ 18 ರೂ. ನಂತೆ ಪೌರ ಕಾರ್ಮಿಕರಿಗೆ ಉಪಹಾರ ನೀಡಲಾಗುತ್ತಿದೆ. ಇನ್ನೂ ಹಣ ಹೆಚ್ಚಾದರೂ ಗುಣಮಟ್ಟದ ಅಹಾರ ನೀಡಿ, ಜತೆಗೆ ಟೆಂಡರ್ ಕರೆದು ಆಹಾರ ಸರಬರಾಜು ಮಾಡುವಂತೆ ಸದಸ್ಯರಾದ ಶ್ರೀನಿವಾಸ್, ಆನಂದ್ ಕುಮಾರ್ ಆಗ್ರಹಿಸಿದ್ದಕ್ಕೆ ಸಭೆಯಲ್ಲಿ ಒಪ್ಪಿಗೆ ಸಿಕ್ಕಿತು.
ತೆರಿಗೆ ಸಂಗ್ರಹಕ್ಕೆ ಕಠಿಣ ಕ್ರಮ ; ಪಟ್ಟಣದ ಸ್ಟಡ್‌ಾರಂನಿಂದ 1.5ಕೋಟಿ ರೂಪಾಯಿ, ಕೆಎಸ್‌ಎಸ್‌ಐಡಿಸಿಯಿಂದ 60 ಲಕ್ಷ ರೂ. ತೆರಿಗೆ ಬಾಕಿ ಸೇರಿ ಇತರ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ರಂಗಸ್ವಾಮಿ ಹೇಳಿದರು. ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಮೊದಲು ನೋಟಿಸ್ ಜಾರಿ ಮಾಡಿ ಟಾಂ ಟಾಂ ಹೊಡೆಸಿ ಆಗಲೂ ತೆರಿಗೆ ಕಟ್ಟದಿದ್ದರೇ ನೀರು ಕರೆಂಟ್ ಸೇರಿ ಮೂಲಸೌಲಭ್ಯ ಕಡಿತ ಮಾಡಿ ಎಂದು ಸದಸ್ಯ ಅರುಣ್ ಕುಮಾರ್ ತಿಳಿಸಿದರು.
ಸದಸ್ಯರು ಸಭೆಗೆ ತರುವ ವಿಷಯಗಳನ್ನು ಸಭೆಯಲ್ಲಿ ಚರ್ಚಸಿದ ನಂತರ ಠರಾವು ಪುಸ್ತಕದಲ್ಲಿ ತಿರುಚದೆ ಯಥಾಸ್ಥಿತಿ ನಮೂದಿಸಬೇಕು. ತಿರುಚಿ ಅನುಕೂಲಕ್ಕೆ ತಕ್ಕಂತೆ ಬರೆದುಕೊಂಡು ಸದಸ್ಯರಿಗೆ ಅಗೌರವ ಉಂಟು ಮಾಡಿದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ರಂಗಸ್ವಾಮಿ, ಪುರಸಭೆ ಅಧ್ಯಕ್ಷ