

ಘಟಪ್ರಭಾ: ಇಲ್ಲಿನ ಪುರಸಭೆ ಕಾರ್ಯಾಲಯ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪುರಸಭೆ ಹಳೇ ಕಟ್ಟಡದ ಎದುರು ಮಂಗಳವಾರ ಪ್ರತಿಭಟಿಸಿದರು.
ಪಟ್ಟಣದ ಮಧ್ಯದಲ್ಲಿರುವ ಈಗಿನ ಕಟ್ಟಡ ಹಳೆಯದಾಗಿದ್ದು, ಈಗಲೋ ಆಗಲೋ ಬೀಳುವಂತಿದೆ. ಸಾರ್ವಜನಿಕರು ಭೀತಿಯಿಂದ ಬಂದು ಹೋಗುತ್ತಿದ್ದಾರೆ. 5-6 ವರ್ಷಗಳ ಹಿಂದೆ ನಿರ್ಮಾಣವಾದ ಹೊಸ (ಹಿಂದಿನ ಧುಪದಾಳ ಗ್ರಾಪಂ) ಕಟ್ಟಡ ಸೂಕ್ತವಾಗಿದೆ. ಆದರೆ, ಕೆಲವರ ಕೈವಾಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗುತ್ತಿಲ್ಲ ಎಂದು ಕರವೇ ಕಾರ್ಯಕರ್ತರು ಆರೋಪಿಸಿದರು.
ಕರವೇ ತಾಲೂಕಾಧ್ಯಕ್ಷ ರೆಹಮಾನ್ ಮೊಖಾಶಿ ಮಾತನಾಡಿ, ಘಟಪ್ರಭಾ ಪುರಸಭೆ ಕಾರ್ಯಾಲಯವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಧುಪದಾಳ ಸೇರಿ ಎಲ್ಲರಿಗೂ ಅನುಕೂಲವಾಗುತ್ತದೆ. 15 ದಿನಗಳ ಒಳಗೆ ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರಿಸಬೇಕು. ಒಂದು ವೇಳೆ ಸ್ಥಳಾಂತರಿಸದಿದ್ದರೆ ಆಮರಣ ಉಪವಾಸ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ಮಲ್ಲವ್ವ ಪಾಟೀಲ, ಈ ಕುರಿತು ಶಾಸಕರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕರವೇ ಕಾರ್ಯಕರ್ತರಾದ ರವಿ ನಾವಿ, ರಾಜು ವಗ್ಗನವರ, ಇಸ್ಮಾಯಿಲ್ ಬಳಿಗಾರ, ಸುಭಾಷ ಮೇತ್ರಿ, ಯಮನಪ್ಪ ಗಾಡಿವಡ್ಡರ, ರಫೀಕ ಜಗದಾಳ, ಎಂ.ಎಂ.ಬಳಿಗಾರಾಘು ಗಾಡಿವಡ್ಡರ, ದರ್ಶನ ಧರ್ಮಟ್ಟಿ,ಸಾತಪ್ಪ ಮುತ್ನಾಳ, ಪ್ರಶಾಂತ ಮುತ್ತೆಪ್ಪಗೋಳ ಇತರರು ಇದ್ದರು.