

ತೇರದಾಳ: ಕಾಮಗಾರಿಗಳ ಬಿಲ್ ಪಾಸ್ ಮಾಡುವಲ್ಲಿ ಪುರಸಭೆ ಕಿರಿಯ ಇಂಜಿನಿಯರ್ ಭಾಗ್ಯಶ್ರೀ ಪಾಟೀಲ ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಪುರಸಭೆ ಆವರಣದಲ್ಲಿ ಗುರುವಾರ ಪ್ರಥಮ ದರ್ಜೆ ಗುತ್ತಿಗೆದಾರ ಮುರುಗೇಶ ಮಿರ್ಜಿ ಪ್ರತಿಭಟನೆ ನಡೆಸಿದರು.
ಅಂದಾಜು 26 ಲಕ್ಷ ರೂ. ವಿವಿಧ ಕಾಮಗಾರಿ ಕೈಗೊಳ್ಳಲು ಪುರಸಭೆ ಆದೇಶ ನೀಡಿದ್ದು, 18.70 ಲಕ್ಷ ರೂ. ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಕಿರಿಯ ಇಂಜಿನಿಯರ್ ಭಾಗ್ಯಶ್ರೀ ಬಿಲ್ ಪಾಸ್ ಮಾಡುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ಮುಖ್ಯಾಧಿಕಾರಿ, ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರು ಬಿಲ್ ಮಂಜೂರು ಮಾಡುವಂತೆ ಹೇಳಿದರೂ ಇಂಜಿನಿಯರ್ ಯಾರ ಮಾತನ್ನೂ ಕೇಳುತ್ತಿಲ್ಲ. ಹೆಚ್ಚು ಪರ್ಸೆಂಟೇಜ್ ಕೊಡುವ ಗುತ್ತಿಗೆದಾರರಿಗೆ ಬಿಲ್ ಮಂಜೂರು ಮಾಡಿದ್ದು, ನನಗೆ ಬಿಲ್ ಕೊಡುತ್ತಿಲ್ಲ ಎಂದು ಗುತ್ತಿಗೆದಾರ ಮುರುಗೇಶ ಆರೋಪಿಸಿದರು.
ಮನವೋಲಿಸಲು ಪ್ರಯತ್ನ: ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ಮುಖಂಡರಾದ ಶಂಕರ ಕುಂಬಾರ, ಗೌತಮ ರೋಡಕರ ಮತ್ತಿತರರು ಪ್ರತಿಭಟನಾ ನಿರತ ಮುರುಗೇಶ ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಿಲ್ ಪಾಸ್ ಮಾಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹಟ ಹಿಡಿದರು. ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಮಾತನಾಡಿ, 87 ಸಾವಿರ ರೂ. ಬಿಲ್ ಪಾಸ್ ಮಾಡಿದ್ದು, ಗುತ್ತಿಗೆದಾರ ಸಹಿ ಆಗದೆ ಇರುವುದರಿಂದ ಚೆಕ್ ತೆಗೆದಿರುವುದಿಲ್ಲ ಎಂದರು.
ಮುರುಗೇಶ ಅವರ 1.50 ಲಕ್ಷ ರೂ. ಕಾಮಗಾರಿಗೆ 87 ಸಾವಿರ ರೂ. ಮಂಜೂರು ಮಾಡಲಾಗಿದೆ. ಸದರಿ ದಾಖಲೆಗೆ ಅವರು ಸಹಿ ಮಾಡಿಲ್ಲ. ಪರ್ಸೆಂಟೇಜ್ ಮಾಹಿತಿ ನನಗೆ ಇಲ್ಲ. ಕಾಮಗಾರಿ ಕುರಿತ ತನಿಖೆಗೆ ನಾನೂ ಸಿದ್ಧಳಿದ್ದೇನೆ. ಭಾಗ್ಯಶ್ರೀ ಪಾಟೀಲ, ಕಿರಿಯ ಅಭಿಯಂತರ