

ಬೇಲೂರು: ಅವ್ಯವಸ್ಥೆಯ ದೂರಿನ ಹಿನ್ನೆಲೆಯಲ್ಲಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಮಂಗಳವಾರ ಸಂಜೆ ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಹಾಗೂ ಉಪಾಧ್ಯಕ್ಷೆ ಉಷಾ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭ ಪುರಸಭೆ ಅಧ್ಯಕ್ಷ ಸಿ.ಎನ್.ದಾನಿಗೆ, ಕುಡಿಯುವ ನೀರು, ಊಟ, ವಿದ್ಯುತ್ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ದೂರಿದರು. ಈ ಸಂದರ್ಭ ವ್ಯವಸ್ಥಾಪಕಿ ಸಾಕಮ್ಮ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಮುಂದಾದರು. ಇದನ್ನು ಗಮನಿಸಿದ ಅಧ್ಯಕ್ಷರು ವ್ಯವಸ್ಥಾಪಕಿ ವಿರುದ್ಧ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಅವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು.
ಬಳಿಕ ಮಾತನಾಡಿದ ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ, ಕಳೆದ ಹದಿನೈದು ದಿನದಿಂದ ಕೆಲ ಬಾಲಕಿಯರು ವಸತಿ ನಿಲಯದ ಊಟ ತಿಂಡಿ ಸೇರಿದಂತೆ ನಿಲಯದ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲಿಸಿದ್ದೇವೆ. ವ್ಯವಸ್ಥಾಪಕಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ವರ್ತನೆ ಎದ್ದು ಕಾಣುತ್ತಿದೆ. ಪುರಸಭೆಯಿಂದ ವಾರದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ನೀಡುವುದರೊಂದಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಲ್ಲದೆ ವೈಯಕ್ತಿಕವಾಗಿ ಪ್ರತಿ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಪುಸ್ತಕಗಳನ್ನು ವಿತರಿಸಲಾಗುವುದು. ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಇಲ್ಲಿನ ಸಮಸ್ಯೆಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಉಪಾಧ್ಯಕ್ಷೆ ಉಷಾ ಮಾತನಾಡಿ, ಇಲ್ಲಿನ ಬಾಲಕಿಯರ ಸಮಸ್ಯೆ ಬಗ್ಗೆ ತಿಳಿದಿದ್ದು, ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.