

ನವಲಗುಂದ: ಚುನಾವಣೆ ನಡೆದು ಒಂದೂವರೆ ವರ್ಷ ಬಳಿಕ ನವಲಗುಂದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರಾಯ್ಕೆಗೆ ನ. 4ರಂದು ಮುಹೂರ್ತ ನಿಗದಿಯಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್ನ 9, ಕಾಂಗ್ರೆಸ್ನ 7, ಬಿಜೆಪಿಯ 6 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಒಬ್ಬ ಪಕ್ಷೇತರ ಸದಸ್ಯ ಜೆಡಿಎಸ್ ಬೆಂಬಲಿಸಿದ್ದು, ಮೂರು ಪಕ್ಷಗಳಲ್ಲಿ ಬಹುಮತವಿಲ್ಲದ್ದರಿಂದ ಹೊಂದಾಣಿಕೆ ಅನಿವಾರ್ಯವಾಗಿದೆ.
ಮೀಸಲಾತಿ ಬಂದಾಗಿನಿಂದ ಈ ಹಿಂದೆ ತಾಪಂನಲ್ಲಿ ಮಾಡಿಕೊಂಡಂತೆ ಕಾಂಗ್ರೆಸ್, ಬಿಜೆಪಿ ಮೈತ್ರಿ ಲಕ್ಷಣಗಳು ಕಂಡು ಬಂದಿದ್ದವು. ಮತ್ತೊಂದೆಡೆ ಹೆಚ್ಚು ಸ್ಥಾನ ಗಳಿಸಿದ ಜೆಡಿಎಸ್, ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾತುರವಿತ್ತು. ಇವೆಲ್ಲ ತಂತ್ರ-ಪ್ರತಿತಂತ್ರ ನಡೆದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿದ್ದವು. ನಂತರ ಸದಸ್ಯರು ಹೊಂದಾಣಿಕೆ ಬಗ್ಗೆ ತಮ್ಮ ಪಕ್ಷಗಳ ಮುಖಂಡರ ನಿರ್ಧಾರಕ್ಕೆ ಬಿಟ್ಟಿದ್ದರು. ಈ ನಡೆ ಪುರವಾಸಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸದ್ಯ ಬಿಜೆಪಿ ಹಾಗೂ ಜೆಡಿಎಸ್ಗೆ ಕಾಂಗ್ರೆಸ್ ಸದಸ್ಯರೇ ನಿರ್ಣಾಯಕರಾಗಿದ್ದಾರೆ.
ಪುರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ರಾಜ್ಯ ಮುಖಂಡರ ಜತೆ ಅಭಿಪ್ರಾಯ ಸಂಗ್ರಹಿಸಿ ಒಂದು ಸುತ್ತಿನ ಸಭೆಯನ್ನು ಹುಬ್ಬಳ್ಳಿಯಲ್ಲಿ ಸೋಮವಾರ ನಡೆಸಿದ್ದಾರೆ. ಇದರಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಜೆಡಿಎಸ್ ಅಥವಾ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಸ್ಪಷ್ಟ ನಿಲುವಿಗೆ ಬಂದಿದ್ದರು. ಅದಾದ ಬಳಿಕ ರಾಜ್ಯ ಮುಖಂಡರು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬಾರದೆಂದು ನಿರ್ದೇಶನ ನೀಡಿದ್ದಾರೆ. ಅದಕ್ಕಾಗಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಮುಖಂಡರು ಬಿಜೆಪಿಯೊಂದಿಗೆ ಹೊಂದಾಣಿಕೆ ಅಸಾಧ್ಯವೆಂದು ನಿಲುವು ವ್ಯಕ್ತಪಡಿಸಿದ್ದಾರೆ. ಇದರಿಂದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೊಂದಾಣಿಕೆ ಬಗ್ಗೆ ಆಯಾ ಪಕ್ಷಗಳ ಮುಖಂಡರು ತಲೆ ಬಿಸಿ ಮಾಡಿಕೊಂಡಿದ್ದರೆ, ಇನ್ನೊಂದೆಡೆ ಅಧ್ಯಕ್ಷ ಗಾದಿಗೇರಲು ಒಳಗೊಳಗೆ ಪೈಪೋಟಿ ನಡೆದಿದೆ. ಕಾಂಗ್ರೆಸ್ನಲ್ಲಿ ಎರಡು ಬಾರಿ ಆಯ್ಕೆಯಾದ ಮಂಜುನಾಥ ಜಾಧವ ಅಥವಾ ಶಿವಾನಂದ ತಡಸಿ, ಜೆಡಿಎಸ್ನಲ್ಲಿ ಎರಡು ಬಾರಿ ಆಯ್ಕೆಯಾದ ಪ್ರಕಾಶ ಶಿಗ್ಲಿ, ಅಪ್ಪಣ್ಣ ಹಳ್ಳದ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ನಡೆದಿದೆ.
ಪುರಸಭೆ ಸಭಾಭವನದಲ್ಲಿ ಬುಧವಾರ ಬೆಳಗ್ಗೆ 10.12ಕ್ಕೆ ನಾಮಪತ್ರ ಸ್ವೀಕಾರ, 12.45ಕ್ಕೆ ನಾಮಪತ್ರಗಳ ಪರಿಶೀಲನೆ, 1.15ಕ್ಕೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ ಎಂದು ಚುನಾವಣಾಧಿಕಾರಿ ನವೀನ ಹುಲ್ಲೂರ ತಿಳಿಸಿದ್ದಾರೆ.
ಬಿಜೆಪಿ ಜತೆ ಹೊಂದಾಣಿಕೆ ಮಾಡಬಾರದೆಂದು ತೀರ್ಮಾನ ತೆಗೆದುಕೊಂಡಿದ್ದೇವೆ. ಜಾತ್ಯತೀತ ಪಕ್ಷಗಳು ಒಂದಾಗಿರಬೇಕು ಎಂಬ ದೃಷ್ಟಿಕೋನದಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಲು ತೀರ್ವನಿಸಿದ್ದೇವೆ. | ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ
EndFragment