ಪುರಪ್ರವೇಶಿಸಿದ ದೊಡ್ಡ ಭಂಡಾರದೊಡತಿಗೆ ಅದ್ದೂರಿ ಸ್ವಾಗತ

Ekanatheshwari
Published on

ಚಿತ್ರದುರ್ಗ: ದೊಡ್ಡ ಭಂಡಾರದೊಡತಿ, ಅಸಂಖ್ಯಾತ ಭಕ್ತರ ಆರಾಧ್ಯ ದೈವ ಶ್ರೀ ಏಕನಾಥೇಶ್ವರಿ ಅಮ್ಮನ ಉತ್ಸವ ಮೂರ್ತಿಯನ್ನು ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನಗರಕ್ಕೆ ಭಕ್ತರು ಕರೆತಂದರು.

ದುರ್ಗದ ಅಧಿದೇವತೆಯ ಗರ್ಭಗುಡಿಯಿಂದ ಉತ್ಸವ ಮೂರ್ತಿಯನ್ನು ಹೊತ್ತ ಅರ್ಚಕರು ಮಡಿ ಹಾಸಿನ ಮೇಲೆ ಕರೆತರುವಾಗ ಮಂಗಳವಾದ್ಯ ಘೋಷ ಮೊಳಗಿತು. ಜಾತ್ರಾ ಪದ್ಧತಿಯಂತೆ ಅಶ್ವವಾಹನರೂಢಳಾದ ನಂತರ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇಗುಲ ಮುಂಭಾಗವಿರುವ ಮಹಾರುದ್ರನ ವಿಗ್ರಹಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕುವ ವೇಳೆ ಉಧೋ ಉಧೋ ಎಂಬ ಹರ್ಷೋದ್ಗಾರ ಮುಗಿಲುಮುಟ್ಟಿತು.

ಕನಕಾಂಬರ, ಮಲ್ಲಿಗೆ, ವಿವಿಧ ವರ್ಣದ ಸೇವಂತಿ, ಸುಗಂಧರಾಜ, ದುಂಡು ಮೊಗ್ಗು ಸೇರಿ ಹಲವು ಬಗೆಯ ಪುಷ್ಪ, ಬೃಹತ್ ಹೂವಿನ ಹಾರಗಳಿಂದ ಮೂರ್ತಿಯನ್ನು ಅಲಂಕರಿಸಿ, ಕೋಟೆಯಿಂದ ಭಕ್ತರು ಕರೆತಂದು ಟ್ರ್ಯಾಕ್ಟರ್‌ನಲ್ಲಿ ಪ್ರತಿಷ್ಟಾಪಿಸಿದ ನಂತರ ಉತ್ಸವ ಇನ್ನಷ್ಟು ಕಳೆಗಟ್ಟಿತು. ಕಹಳೆ, ನಗಾರಿ, ಉರುಮೆ, ಡೊಳ್ಳು, ತಮಟೆ ಸೇರಿ ಜನಪದ ಕಲಾತಂಡಗಳು ಮೆರುಗು ನೀಡಿದವು.

ಭಕ್ತರ ಮನೆಗಳೇ ತವರು ಮನೆ ಎಂಬ ನಂಬಿಕೆ ಇರುವ ಕಾರಣ ಕೆಳಗಿನ ದುರ್ಗಕ್ಕೆ ದೇವಿಯನ್ನು ಕರೆತರಲು ಬೆಳಗ್ಗೆ 5ರಿಂದಲೇ ಸಾವಿರಾರು ಮಂದಿ ಕೋಟೆಯಲ್ಲಿ ಜಮಾಯಿಸಿದ್ದರು. ಪೂಜಾ ವಿಧಿವಿಧಾನ ಪೂರ್ಣಗೊಳ್ಳುವ ಸಮಯಕ್ಕಾಗಿ ಕಾಯುತ್ತಲೇ ಕುಳಿತಿದ್ದರು. ನಂತರ ಅಲ್ಲಿಂದ ನಗರ ಪ್ರವೇಶಿಸಿದ್ದೆ ತಡ ಸಂಚರಿಸಿದ ಮಾರ್ಗದ ಕಡೆಯಲೆಲ್ಲಾ ನೀರೆರಚಿ, ರಂಗೋಲಿ ಬಿಡಿಸಿ, ಮಾವಿನ ತೋರಣ ಕಟ್ಟಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕೋಟೆಯ ಮೇಲುದುರ್ಗದ ದೇವಿಯ ಮೂಲ ದೇಗುಲದಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ ಸೇರಿ ಇತರೆ ಪೂಜಾ ಕೈಂಕರ್ಯವನ್ನು ದೇಗುಲದ ಅರ್ಚಕರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಸಂಪ್ರದಾಯದಂತೆ ನಡೆದ ದೊಡ್ಡ ಭಂಡಾರದ ಪೂಜೆ ಭಕ್ತರನ್ನು ಆಕರ್ಷಿಸಿತು.

ಕೋಟೆ ಮಾರ್ಗ, ಕಾಮನಬಾವಿ ಬಡಾವಣೆ, ಕರುವಿನಕಟ್ಟೆ ವೃತ್ತ, ಕೂಡಲಿ ಶೃಂಗೇರಿ ಮಠ, ಸುಣ್ಣದಗುಮ್ಮಿ, ಜೋಗಿಮಟ್ಟಿ ರಸ್ತೆ, ತ್ರಿಪುರಸುಂದರಿ ತಿಪ್ಪನಘಟ್ಟಮ್ಮ ದೇವಿ ದೇಗುಲ ಅಕ್ಕಪಕ್ಕ, ಜಟ್‌ಪಟ್‌ನಗರ, ಆಡುಮಲ್ಲೇಶ್ವರ ರಸ್ತೆ, ಜಿಲ್ಲಾ ಕ್ರೀಡಾಂಗಣ, ಪ್ರಶಾಂತ ನಗರ, ಕೆಳಗೋಟೆ, ಜಿಲ್ಲಾಧಿಕಾರಿ, ಗುಡಿಗೌಡರು ಒಳಗೊಂಡು ಅನೇಕರು ಪೂಜೆ ಸಲ್ಲಿಸಿದರು.

ಅನೇಕ ಭಕ್ತರ ಮನೆಗಳ ಮುಂಭಾಗ ಮಹಾಮಂಗಳಾರತಿ ಪೂಜೆ ನೆರವೇರಿದ ಬಳಿಕ ಪಾನಕ, ಕೋಸುಂಬರಿ, ಮಜ್ಜಿಗೆ, ಪಾಯಸ, ಪುಳಿಯೊಗರೆ, ಚಿತ್ರಾನ್ನ, ಪಲಾವ್, ಮೊಸರನ್ನ, ಕಡಲೆಕಾಳು ಹುಸುಳಿ ಸೇರಿ ಇತರೆ ಪ್ರಸಾದ ವಿತರಿಸುವ ಮೂಲಕ ಭಕ್ತಿ ಸಮರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net