

ಚಿತ್ರದುರ್ಗ: ರಾಘವೇಂದ್ರ ಸ್ವಾಮಿಯ 353ನೇ ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ಗುರು ಸಾರ್ವಭೌಮರ ಮಹಾರಥೋತ್ಸವ ಸಕಲ ಮಂಗಳವಾದ್ಯಗಳೊಂದಿಗೆ ರಾಜಬೀದಿಗಳಲ್ಲಿ ಸಂಚರಿಸಿತು.
ಅಲಂಕೃತ ರಥದೊಳಗೆ ಸ್ವಾಮಿಯ ಮೂರ್ತಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವಕ್ಕೆ ಚಾಲನೆ ದೊರೆತು ಪುರ ಪ್ರವೇಶಿಸಿದ ರಾಯರಿಗೆ ಮಾರ್ಗಗಳಲ್ಲಿ ನೀರೆರೆದು, ಪುಷ್ಪ ಮಳೆ ಸುರಿಸುವ ಮೂಲಕ ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಕೆಲವರು ಮೈಮರೆತು ಕುಣಿದು ಸಂಭ್ರಮಿಸಿದರು. ಆನೆಬಾಗಿಲು, ಗಾಂಧಿವೃತ್ತ ಸೇರಿ ವಿವಿಧೆಡೆ ಸಂಚರಿಸಿದ ನಂತರ ಶ್ರೀಮಠ ತಲುಪಿತು.
ನಂಜನಗೂಡು ರಾಘವೇಂದ್ರ ಸ್ವಾಮಿಯ ಚಿತ್ರದುರ್ಗದ ಶಾಖಾ ಮಠದಲ್ಲಿ ಸ್ವಾಮಿಯ ಉತ್ತರಾರಾಧನೆ ಪ್ರಯುಕ್ತ ರಾಯರ ವೃಂದಾವನವನ್ನು ದ್ರಾಕ್ಷಿ, ಹೂವಿನ ಹಾರ, ಸೇಬು, ದಾಳಿಂಬೆ, ಬಾಳೆ, ಕಿತ್ತಳೆ, ಮೋಸುಂಬಿ, ಅನಾನಸ್ ಸೇರಿ ವಿವಿಧ ಹಣ್ಣುಗಳಿಂದ ಫಲಾಲಂಕಾರದಲ್ಲಿ ಭಕ್ತರ ಕಣ್ಮನ ಸೆಳೆಯುವಂತೆ ವಿಶೇಷವಾಗಿ ಅಲಂಕರಿಸಲಾಗಿತ್ತು. ರಾಘವೇಂದ್ರ ಸ್ವಾಮಿ ಅವರ ಸ್ಮರಣೆ ರೂಪಕ ಭಕ್ತರ ಗಮನ ಸೆಳೆಯಿತು.
ಬೆಳಗ್ಗೆ 5.30ರಿಂದ 9.30ರೊಳಗೆ ನಿರ್ಮಾಲ್ಯ, ಅಷ್ಟೋತ್ತರ ಸಹಿತ ವಿಶೇಷ ಫಲಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ, ಮಧ್ಯಾಹ್ನ 12ರ ನಂತರ ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾ ಮಂಗಳಾರತಿ ವಿಜೃಂಭಣೆಯಿಂದ ನೆರವೇರಿತು. ನಂತರ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ರಾತ್ರಿ ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ಟಾವಧಾನ, ಮಹಾಮಂಗಳಾರತಿ ಪೂಜೆ ನಡೆಯಿತು. ಸಾವಿರಾರು ಮಂದಿ ಪ್ರಸಾದ ಸ್ವೀಕರಿಸಿದರು.
ಬುಧವಾರ ಸಪ್ತಗಿರಿ ಭಜನಾ ಮಂಡಳಿಯಿಂದ ಭಜನೆ, ಸುಜೀತ್ ಕುಲಕರ್ಣಿ ಅವರು ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು.
ಆ. 23ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ, ಪವಮಾನ ಹೋಮ, ಸರ್ವಸಮರ್ಪಣೋತ್ಸವ ಪೂಜಾ ಕಾರ್ಯಕ್ರಮಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಠದ ವ್ಯವಸ್ಥಾಪಕ ಪ್ರಾಣೇಶ್ ಕೊಪ್ಪರ್, ಗೌರವ ವಿಚಾರಣಕರ್ತ ಗೋವಿಂದಮೂರ್ತಿ ಕೋರಿದ್ದಾರೆ.