

ಕೋಲಾರ: ಪವರ್ಸ್ಟಾರ್ ಡಾ.ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಹಾಗೂ ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ನಗರದಲ್ಲಿ ಅಭಿಮಾನಿಗಳು ಗುರುವಾರ ಅದ್ದೂರಿ ಮೆರವಣಿಗೆ ನಡೆಸಿದರು. ಪುನೀತ್ ಭಾವಚಿತ್ರ ಹೊತ್ತ ಟೆಂಪೋ ಮುಂದೆ ಸಾಗಿದರೆ ಸ್ಟಾರ್ಗಳನ್ನು ಹೊತ್ತ ಆಟೋಗಳು ಹಿಂಬಾಲಿಸಿದವು. ಕನ್ನಡ ಧ್ವಜಗಳು ರಾರಾಜಿಸಿದ್ದು ರಾಜ್ಯೋತ್ಸವವನ್ನು ನೆನಪಿಸುವಂತಿತ್ತು.
ನಗರದ ಗಾಂಧಿವನದಲ್ಲಿ ಪುನೀತ್ ಭಾವಚಿತ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಪುನೀತ್ ರಾಜ್ಕುಮಾರ್ ಅವರಿಗೆ ಅಭಿಮಾನಿಗಳೇ ದೇವರು. ಅವರು ಈ ನೆಲದ ನಿಜವಾದ ದೇವರಾಗಿದ್ದು, ಕಷ್ಟದಲ್ಲಿರುವವರನ್ನು ಆದರಿಸುತ್ತಿದ್ದರು. ಸಹಾಯ ಮಾಡುವ ಗುಣ ಅವರಲ್ಲಿದ್ದರೂ ಎಲ್ಲೂ ತೋರಿಸಿಕೊಂಡಿರಲಿಲ್ಲ. ಸರಳ ವ್ಯಕ್ತಿತ್ವ ಹೊಂದಿದ್ದ ಅವರು ಸಮಾಜದಲ್ಲಿ ಹೇಗಿರಬೇಕು ಎಂಬುದನ್ನು ತೋರಿಸಿ ಹೋಗಿದ್ದಾರೆ. ಅವರ ಆದರ್ಶ ಯುವ ಜನರಿಗೆ ಸ್ಫೂರ್ತಿಯಾಗಬೇಕು ಎಂದರು.
ಮೆರವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದು, ಅಪ್ಪುಗೆ ಜೈಕಾರ ಹಾಕಿದರು. ಬ್ಯಾಂಡ್ಸೆಟ್ ಕಲಾವಿದರು ಕನ್ನಡ ಗೀತೆಗಳನ್ನು ನುಡಿಸುತ್ತಾ ಸಾಗಿದರು. ಎಂಜಿ ರಸ್ತೆ ಮೂಲಕ ಶಾರದಾ ಚಿತ್ರಮಂದಿರದ ತನಕ ಮೆರವಣಿಗೆ ಸಾಗಿ ಬಂದಿತು. ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕೋ.ನಾ ಪ್ರಭಾಕರ್, ಮುಖಂಡರಾದ ನಾ.ಮಂಜುನಾಥ್, ಕೆ.ಪಿ.ಶ್ರೀಕಾಂತ್ಗೌಡ, ಕಲಾವಿದ ವಿಷ್ಣು ಇತರರು ಇದ್ದರು.
ಅನ್ನ ಸಂತರ್ಪಣೆ: ನಗರದ ಹಲವೆಡೆ ಅಭಿಮಾನಿಗಳು ಮತ್ತು ಸಂಘ&ಸಂಸ್ಥೆಗಳಿಂದ ಡಾ.ಪುನೀತ್ ಹುಟ್ಟು ಹಬ್ಬ ಆಚರಿಸಿದ್ದು, ಥಿಯೇಟರ್ಗಳಲ್ಲಷ್ಟೇ ಅಲ್ಲದೆ, ಇತರೆಡೆಯೂ ಅನ್ನಸಂತರ್ಪಣೆ ಬಿರಿಯಾನಿ ಹಂಚಲಾಯಿತು. ಹಾರೋಹಳ್ಳಿಯ ಕಸ್ತೂರಿ ಕನ್ನಡ ಸಂಘದ ಸದಸ್ಯರು ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ಪುಸ್ತಕ, ಪೆನ್ ವಿತರಿಸಿದರಲ್ಲದೆ, ಸಂಜೆ ಅನ್ನಸಂತರ್ಪಣೆ ಏರ್ಪಡಿಸಿದ್ದರು. ನಗರಸಭಾ ಸದಸ್ಯ ಮುರಳಿಗೌಡ, ಮುಖಂಡರಾದ ವಿಜಯ್ಕುಮಾರ್, ಬಾಲಾಜಿ ಇತರರು ಭಾಗವಹಿಸಿದ್ದರು.
ನಗರದ ಶಾರದಾ ಮತ್ತು ನಾರಾಯಣಿ ಚಿತ್ರ ಮಂದಿರಗಳಲ್ಲಿ ಜೇಮ್ಸ್ ಚಿತ್ರ ಬಿಡುಗಡೆ ಕಂಡಿದ್ದು, ಪ್ರದರ್ಶನ ಕಾಣುತ್ತಿದೆ. ಬೆಳಗ್ಗೆ 5.45ಕ್ಕೆ ಶಾರದಾ ಚಿತ್ರಮಂದಿರದಲ್ಲಿ ಅಭಿಮಾನಿಗಳು ಮೊದಲ ಶೋ ವೀಕ್ಷಿಸಿದರು. ಎರಡೂ ಥಿಯೇಟರ್ಗಳ ಎದುರು ಪುನೀತ್ ಬ್ಯಾನರ್, ಕಟೌಟ್ ಮತ್ತು ಸ್ಟಾರ್ಗಳು ರಾರಾಜಿಸುತ್ತಿದ್ದವು. ಬೆಳಗ್ಗೆ 6.30 ಕ್ಕೆ ನಾರಾಯಣಿ ಚಿತ್ರಮಂದಿರದಲ್ಲಿ ಮೊದಲ ಶೋ ನಡೆಯಿತು. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿನಿಮಾ ವೀಕ್ಷಣೆಗೂ ಮುನ್ನ ಪುನೀತ್ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಥಿಯೇಟರ್ನಲ್ಲಿ ಎದ್ದು ನಿಂತ ಅಭಿಮಾನಿಗಳು 1 ನಿಮಿಷ ಮೌನಾಚರಣೆ ಮಾಡಿದರು. ಮಧ್ಯಾಹ್ನ ಶಾರದಾ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಬಿರಿಯಾನಿ ವಿತರಿಸಲಾಯಿತು.
ಅಭಿಮಾನಿ ಕಣ್ಣೀರು: ನಾರಾಯಣಿ ಚಿತ್ರಮಂದಿರದಲ್ಲಿ ಜೇಮ್ಸ್ ಚಿತ್ರ ವೀಕ್ಷಿಸಲು ಮೊದಲ ಶೋಗೆ ಟಿಕೆಟ್ ಸಿಗದಿದ್ದಕ್ಕೆ ಅಭಿಮಾನಿಯೊಬ್ಬ ಕಣ್ಣೀರು ಹಾಕಿದರು. ಚಿತ್ರಮಂದಿರ ಬಳಿ ಪುನೀತ್ಗೆ ಕೈ ಮುಗಿದು ಬಿಕ್ಕಿಬಿಕ್ಕಿ ಅಳುತ್ತಿದ್ದ ಇಟ್ಟಿಗೆ ಕಾರ್ಖಾನೆ ಕಾರ್ಮಿಕ ಶ್ರೀನಿವಾಸ್ ಅವರನ್ನು ಸಂತೈಸಲು ಹಲವರು ಯತ್ನಿಸಿದರು. ಆದರೆ ತಮ್ಮ ದೇವರ ಚಿತ್ರ ವೀಕ್ಷಣೆ ಕಾಣದ್ದಕ್ಕೆ ಅವರು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕೂಲಿ ಕೆಲಸ ಬಿಟ್ಟು ಸಿನಿಮಾ ನೋಡೋದಿಕ್ಕೆ ಬಂದಿದ್ದೇನೆ. ಟಿಕೆಟ್ ಸಿಗ್ತಿಲ್ಲ. ಆನ್ ಲೈನ್ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದು, ನನಗೆ ನಿರಾಸೆ ಎದುರಾಗಿದೆ ಎಂದು ಅಳಲು ತೋಡಿಕೊಂಡರು.