ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರ

Jeevadhara
Published on


ಮೈಸೂರು : ಚಿತ್ರನಟ ಡಾ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.

ಒಂಟಿ ಕೊಪ್ಪಲ್ ಮತ್ತು ಗೋಕುಲಂ ಗೆಳೆಯರ ಬಳಗ ಹಾಗೂ ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು, ಜೀವದಾರ ರಕ್ತ ನಿಧಿ ಕೇಂದ್ರ ಸಹಯೋಗದೊಂದಿಗೆ ಒಂಟಿ ಕೊಪ್ಪಲಿನ ಶ್ರೀ ರಾಮ ಕಲ್ಯಾಣ ಮಂಟಪದಲ್ಲಿ ಆಯೋಜಿದ್ದ ಕಾರ್ಯಕ್ರಮದಲ್ಲಿ 416 ಮಂದಿ ಸ್ವಯಂಪ್ರೇರಿತವಾಗಿ ರಕ್ತ ನೀಡಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಯಂತ್ ಅವರು ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನದಿಂದ ತುರ್ತು ಚಿಕಿತ್ಸೆ ಪಡೆಯುವ ರೋಗಿಗಳಿಗೆ ಜೀವಧಾನ ಮಾಡಿದಂತಾಗುತ್ತದೆ. ಹೀಗಾಗಿ ಈ ರೀತಿಯ ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಬೇಕು. ರಕ್ತನಿಧಿ ಕೇಂದ್ರಗಳು ಕೈಗೊಂಡಿರುವ ಈ ಕಾರ್ಯದಿಂದ ಮೈಸೂರಿನಲ್ಲಿ ಅಗತ್ಯವಿರುವ ಎಲ್ಲರಿಗೂ ರಕ್ತ ದೊರೆಯುತ್ತದೆ ಎಂದರು.

ಜೀವಧಾರ ರಕ್ತನಿಧಿ ಕೇಂದ್ರದ ಎಸ್.ಇ. ಗಿರೀಶ್ ಅವರು ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಈ ವರೆಗೆ ನಡೆದಿರುವ ರಕ್ತದಾನ ಶಿಬಿರಗಳೆಲ್ಲವೂ ಯಶಸ್ವಿಯಾಗಿವೆ. ಅದೇ ರೀತಿ ಇಂದಿನ ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚುಮಂದಿ ರಕ್ತದಾನ ಮಾಡಿದ್ದಾರೆ. ಅಪ್ಪು ಅವರ ದಾನ ಗುಣ ಹಾಗೂ ಅವರ ವ್ಯಕ್ತಿತ್ವವನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ಅವರ ವಿಚಾರಗಳಿಗೆ ಇಂದಿಗೂ ಮನ್ನಣೆ ದೊರೆಯುತ್ತಿದೆ. ಇದಕ್ಕೆ ಅವರ ಹೆಸರಿನಲ್ಲಿ ನಡೆದ ರಕ್ತದಾನ ಶಿಬಿರ ಯಶಸ್ವಿಯಾಗುತ್ತಿರುವುದು ಸಾಕ್ಷಿಯಾಗಿದೆ ಎಂದು ಸ್ಮರಿಸಿದರು.

ಆರೋಗ್ಯವಂತ ಯುವಕರು ರಕ್ತದಾನದಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜದ ಸೃಷ್ಟಿಗೆ ಕೊಡುಗೆ ನೀಡಬೇಕು. ಈ ರೀತಿಯ ಕಾರ್ಯದಲ್ಲಿ ಪಾಲ್ಗೊಂಡ ವ್ಯಕ್ತಿಗೆ ತಾವು ಮಾಡಿದ ಒಳ್ಳೆಯ ಕೆಲಸದಿಂದ ತಮ್ಮ ಮೇಲೆಯೇ ಗೌರವ ಹೆಚ್ಚಾಗುತ್ತದೆ. ಮಾತ್ರವಲ್ಲದೇ ಜೀವ ಉಳಿಸಲು ಕೈ ಜೋಡಿಸಿದ್ದೇನೆ ಎಂಬ ತೃಪ್ತ ಭಾವನೆ ಮೂಡುತ್ತದೆ ಎಂದರು.

ಹಾಸ್ಯ ನಟ ಚಿಕ್ಕಣ್ಣ ಅವರು ಕಾರ್ಯಕ್ರಮಕ್ಕೆ ಆಗಮಿಸಿ ರಕ್ತದಾನಿಗಳಿಗೆ ಪ್ರೇರಣೆ ನೀಡಿದರು. ಪಾಲಿಕೆ ಸದಸ್ಯೆ ಭಾಗ್ಯ ಮಾದೇಶ್, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ,ಕಾರ್ತಿಕ್, ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕರಾದ ಆನಂದ್, ದೇವೇಂದರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net