ಪುನೀತ್ ರಾಜಕುಮಾರ್ ಪ್ರತಿಮೆ ಮುಂದೆ ಬ್ಯಾನರ್‌ಗಳು: ಆಕ್ರೋಶ

ಪುನೀತ್ ರಾಜಕುಮಾರ್ ಪ್ರತಿಮೆ ಮುಂದೆ ಬ್ಯಾನರ್‌ಗಳು: ಆಕ್ರೋಶ
Published on

ಹಾಸನ: ಎನ್.ಆರ್. ವೃತ್ತದಲ್ಲಿ ನಿರ್ಮಿಸಲಾಗಿರುವ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಯನ್ನು ಸುತ್ತಮುತ್ತ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ದೊಡ್ಡ ದೊಡ್ಡ ಬ್ಯಾನರ್ ಹಾಕಿ ಪುತ್ಥಳಿ ಕಾಣದಂತೆ ಮಾಡಿದ್ದಾರೆ. ಇನ್ನು ಮುಂದೆ ಈ ಜಾಗದಲ್ಲಿ ಯಾವುದೇ ಪಕ್ಷ, ಸಂಘ- ಸಂಸ್ಥೆಗಳ ಬ್ಯಾನರ್ ಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ, ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಮತ್ತು ನಗರಸಭೆಗೆ ಮನವಿ ಸಲ್ಲಿಸಲಾಯಿತು.

ನಗರದ ಹೃದಯ ಭಾಗ ಎನ್ ಆರ್ ವೃತ್ತದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ತಮ್ಮ ಅನುಮತಿ ಮೇರೆಗೆ ಸ್ಥಾಪಿಸಲಾಗಿದೆ. ಈ ಪುತ್ಥಳಿಗೆ ಮರೆಯಾಗುವಂತೆ ಕೆಲವು ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕರು ಸುತ್ತಲೂ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕಿದ್ದಾರೆ, ಸ್ಟೀಲ್ ಕಂಬಿಗಳಿಗೆ ಬ್ಯಾನರ್ ಗಳನ್ನು ಕಟ್ಟಲಾಗಿದೆ. ಇದರಿಂದ ಪುತ್ಥಳಿಯೇ ಕಾಣದಂತಾಗಿದೆ. ಇನ್ನು ಮುಂದೆ ಈ ಸ್ಥಳದಲ್ಲಿ ಯಾವುದೇ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕದಂತೆ ಮನವಿ ಮಾಡಲಾಗಿದೆ. ಇಲ್ಲಿ ಫ್ಲೆಕ್ಸ್ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಹೃದಯಪೂರ್ವಕವಾಗಿ ವಿನಂತಿಸುವುದಾಗಿ ಪದಾಧಿಕಾರಿಗಳು ಮನವಿ ಮಾಡಿದರು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೆ ಪುತ್ಥಳಿ ಸುತ್ತಮುತ್ತ ಯಾರಾದರೂ ಬ್ಯಾನರ್, ಕಟೌಟ್ ಹಾಕಲು ಅನುಮತಿ ನೀಡಿದರೆ ನಾವೇ ಎಲ್ಲವನ್ನೂ ಕಿತ್ತು ಹಾಕಿ ಹೋರಾಟ ಮಾಡುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಸಿದರು.

ಇದೇ ವೇಳೆ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ರತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಧುಸೂದನ್, ಶಂಕರ್, ಗುರುಪ್ರಸಾದ್, ಉಮೇಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net