ಪುನೀತ್ ಜನ್ಮದಿನ ಅಂಗವಾಗಿ ಬೈಕ್ ರಾಲಿ, ಉಚಿತ ಆರೋಗ್ಯ ತಪಾಸಣೆ

17_HSN_07
Published on

ಹಾಸನ: ದಿ.ಡಾ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಸಾಲಗಾಮೆಯಲ್ಲಿ ಸೋಮವಾರ ಪಿ.ಡಿ. ಚಂದ್ರುಶೇಖರ್ ಅಭಿಮಾನಿಗಳ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೈಕ್ ರ‌್ಯಾಲಿ ಕಾರ್ಯಕ್ರಮ ನಡೆಯಿತು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅವರು ಜೀವಿತಾವಧಿಯಲ್ಲಿ ಮಾಡಿದ ಅಪಾರ ಸೇವೆಯಿಂದಲೇ ಇಂದಿಗೂ ಜನರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಪುನೀತ್ ಕೇವಲ ನಟರಾಗಿ ಮಾತ್ರವಲ್ಲದೆ ಎಲೆಮರೆ ಕಾಯಿಯಂತೆ ಜನಸೇವೆಯಲ್ಲಿ ತೊಡಗುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅವರ ಸೇವಾ ಮನೋಭಾವದ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದರು.

ಪುನೀತ್ ಹಾದಿಯಲ್ಲೇ ಹಲವರು ಜನಸೇವೆಯಲ್ಲಿ ತೊಡಗಿದ್ದಾರೆ. ಈ ಪೈಕಿ ಜೆಸಿಬಿ ಚಂದ್ರು ಕೂಡ ಒಬ್ಬರು. ಜನರ ಆರೋಗ್ಯದ ಹಿತ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಜನರು ಇದರ ಸದುಪಯೋಗ ಪಡಿಸಿಕೊಂಡು ದೊಡ್ಡ ಮನೆ ಹುಡುಗ ಎಂದೇ ಖ್ಯಾತಿ ಗಳಿಸಿರುವ ಪುನೀತ್ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯೋಣ ಎಂದು ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ಪಿ.ಡಿ. ಚಂದ್ರುಶೇಖರ್ (ಜೆಸಿಬಿ) ಮಾತನಾಡಿ, ಪುನೀತ್ ರಾಜ್ ಕುಮಾರ್ ಜಾತ್ಯತೀತ ನಾಯಕ. ಅವರ ಸೇವಾ ಮನೋಭಾವನೆ ದಾರಿಯಲ್ಲಿ ನಡೆಯುವ ಸಲುವಾಗಿ ಈ ಶಿಬಿರ ಆಯೋಜಿಸಲಾಗಿದೆ. ವಿವಿಧ ಆಸ್ಪತ್ರೆಗಳಿಂದ ನುರಿತ ವೈದ್ಯರ ತಂಡ ಆಗಮಿಸಿ ಆರೋಗ್ಯ ತಪಾಸಣೆಯಲ್ಲಿ ತೊಡಗಿದೆ. ಅಲ್ಲದೆ ರಕ್ತದಾನ ನೇತ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಹಾಸನ ನಗರದ ಎನ್.ಆರ್ ವೃತ್ತದ ಬಳಿ ಇರುವ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಬೈಕ್ ರ‌್ಯಾಲಿ ಮೂಲಕ ಸಲಗಾಮೆ ತಲುಪಲಾಯಿತು. ಜತೆಗೆ ಸೋಮವಾರ ರಾತ್ರಿ ಕಾಮಿಡಿ ಕಿಲಾಡಿಗಳು ಹಾಗೂ ಸರಿಗಮಪ ಖ್ಯಾತಿಯ ಹಲವು ನಟರು ಹಾಗೂ ಗಾಯಕರು ಆಗಮಿಸಿ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net