

ಆನೇಕಲ್: ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಸಂಘ-ಸಂಸ್ಥೆಗಳು ಮನಸ್ಸು ಮಾಡಿದರೆ, ಎಂಥ ಚಮತ್ಕಾರವನ್ನಾದರೂ ಮಾಡಬಹುದು ಎಂಬುದಕ್ಕೆ ಪಟ್ಟಣದಲ್ಲಿರುವ ಕಲ್ಯಾಣಿ ಉತ್ತಮ ಉದಾಹರಣೆಯಾಗಿದೆ.
ಹಲವು ವರ್ಷಗಳಿಂದ ನೀರಿನ ಹರಿವು ಇಲ್ಲದೆ, ಕಾಡು ಗಿಡ, ಮರಗಳು, ಕಸ, ಕೊಳೆಗಳಲ್ಲಿ ಮುಚ್ಚಿಹೋಗಿದ್ದ ಕಲ್ಯಾಣಿ ಈಗ ನಳನಳಿಸುತ್ತಿದೆ. ನೀರಿನಾಸರೆಗೆ ಕೊಳವೆಬಾವಿ ಕೊರೆಸಿದ್ದು, ಈಗ ತುಂಬಿಕೊಂಡಿದೆ.
ನೀರಿದ್ದರೆ ಕಲ್ಯಾಣಿಯಾಗಿ ಕಣ್ತುಂಬಿಕೊಳ್ಳಬಹುದಾಗಿದೆ. ನೀರು ಬತ್ತಿದರೆ ಬಯಲು ರಂಗಮಂದಿರವಾಗಿ ಇದನ್ನು ಬಳಸಿಕೊಳ್ಳುವ ರೀತಿ ಪುನಶ್ಚೇತನಗೊಳಿಸಿರುವುದು ಮತ್ತೊಂದು ವಿಶೇಷ.
ಕರೊನಾ ಸೋಂಕು ತೀವ್ರವಾಗಿ ಹಬ್ಬುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ರೋಟರಿ ಕ್ಲಬ್ ಬಸವನಗುಡಿ ಮತ್ತು ರೋಟರಿ ಕ್ಲಬ್ ಸ್ಪಂದನದ ಸದಸ್ಯರು ಆನೇಕಲ್‌ನ ನಾರಾಯಣಪುರದಲ್ಲಿದ್ದ ಬಡವರಿಗೆ ಮಾಸ್ಕ್‌ಗಳನ್ನು ವಿತರಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಕಲ್ಯಾಣಿ ಅವರ ಕಣ್ಣಿಗೆ ಬಿದ್ದಿತ್ತು.
ಏಳು ಭಾನುವಾರ ಶ್ರಮದಾನ: ರೋಟರಿ ಕ್ಲಬ್ ಬಸವನಗುಡಿ ಮತ್ತು ರೋಟರಿ ಕ್ಲಬ್ ಸ್ಪಂದನ ಸದಸ್ಯರು ಸತತ ಏಳು ಭಾನುವಾರ ಬೆಳಗ್ಗೆ 6ರಿಂದ 11 ಗಂಟೆಯವರೆಗೆ ಶ್ರಮದಾನದ ಮೂಲಕ ಕಲ್ಯಾಣಿಯನ್ನು ಜೀರ್ಣೋದ್ಧಾರಗೊಳಿಸಿದರು. ಸ್ವಯಂಪ್ರೇರಿತರಾಗಿ 60ರಿಂದ 70 ಜನರು ಶ್ರಮದಾನಕ್ಕೆ ಕೈಜೋಡಿದರು. ಸ್ವಚ್ಛತಾ ಕಾರ್ಯಕ್ಕೆ ಆನೇಕಲ್ ಪುರಸಭೆ ಕೂಡ ಕೈಜೋಡಿಸಿತು. ಸ್ವತಃ ಶ್ರಮದಾನ ಮಾಡುವ ಮೂಲಕ ಪುರಸಭೆ ಅಧ್ಯಕ್ಷ ಎನ್.ಎಸ್.ಪದ್ಮನಾಭ್ ಇತರರಿಗೂ ಮಾದರಿಯಾದರು.
ಸ್ವಯಂಸೇವಕರನ್ನು ಕರೆತಂದ ವಾಟ್ಸ್‌ಆ್ಯಪ್ ಗ್ರೂಪ್: ಆನೇಕಲ್ ಕಲ್ಯಾಣಿ ಪುನಶ್ಚೇತನಕ್ಕೆ ರೋಟರಿ ಸದಸ್ಯರು ಮುಂದಾಗುತ್ತಿರುವಂತೆ ಕೆಲವು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಇದರ ಬಗ್ಗೆ ಚರ್ಚೆಗಳು ಆರಂಭವಾದವು. ಈ ರೀತಿ ಮಾಹಿತಿಯು ಒಬ್ಬರಿಂದ ಒಬ್ಬರಿಗೆ ಹಬ್ಬಿ ಸ್ವಪ್ರೇರಣೆಯಿಂದ ಶ್ರಮದಾನದಲ್ಲಿ ತೊಡಗಿಕೊಳ್ಳುವವರ ಸಂಖ್ಯೆಯೂ ದುಪ್ಪಟ್ಟಾಗುತ್ತಲೇ ಸಾಗಿತು.
ಅಸ್ತಿತ್ವಕ್ಕೆ ಬಂದ ಕಲ್ಯಾಣಿ ವೇದಿಕೆ: ಕಲ್ಯಾಣಿಯ ಪುನಶ್ಚೇತನ ಕಾರ್ಯಕ್ಕೆ ಅಭೂತಪೂರ್ವ ಸಹಕಾರ ಸಿಗಲಾರಂಭಿಸಿದ ಬಳಿಕ ತಂಡದ ಸದಸ್ಯರು ಆನೇಕಲ್ ಸುತ್ತಮುತ್ತ ಇರುವ ಕಲ್ಯಾಣಿಗಳನ್ನು ಕೂಡ ಜೀರ್ಣೋದ್ಧಾರಗೊಳಿಸಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ನಮ್ಮ ಕಲ್ಯಾಣಿ ವೇದಿಕೆ ಎಂಬ ಹೆಸರಿನಲ್ಲಿ ಸ್ವಯಂಸೇವಕರ ಪಡೆ ರಚಿಸಿಕೊಂಡರು. ಇದಕ್ಕೆ ಆನೇಕಲ್‌ನ ಮುರಳಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿಕೊಂಡರು. ಜತೆಗೆ, ವಿವಿಧ ಕಲ್ಯಾಣಿಗಳ ಜೀರ್ಣೋದ್ಧಾರಕ್ಕೆ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ.
ಚಿತ್ರಕಲೆ ಸ್ಪರ್ಧೆ: ವಿಶ್ವ ಜಲದಿನ (ಮಾ.22) ಪುನರುಜ್ಜೀವನಗೊಂಡಿರುವ ಕಲ್ಯಾಣಿಯನ್ನು ಎಲ್ಲರಿಗೂ ಪರಿಚಯಿಸುವ ಉದ್ದೇಶದಿಂದ ನಮ್ಮ ಕಲ್ಯಾಣಿ ವೇದಿಕೆಯು ವಯೋಮಿತಿಯ ನಿರ್ಬಂಧವಿಲ್ಲದೆ ಚಿತ್ರಕಲೆ, ಪೋಸ್ಟ್ ಮೇಕಿಂಗ್, ಪ್ರಬಂಧ ಸ್ಪರ್ಧೆ ಆಯೋಜಿಸಿತ್ತು.
ಕಲ್ಯಾಣಿ ಮತ್ತೆ ನಳನಳಿಸುವಂತೆ ಮಾಡಿದ ರೋಟರಿ ಕ್ಲಬ್‌ಗಳ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಮೊದಲು ರೋಟರಿ ಸದಸ್ಯರಿಗೆ ಸೀಮಿತವಾಗಿದ್ದ ಶ್ರಮದಾನಕ್ಕೆ ಸಮಾನ ಮನಸ್ಕ ಸ್ಥಳೀಯರು ಕೈಜೋಡಿಸಿದರು. ಕಲ್ಯಾಣಿಯ ಜಲಮೂಲ ವೃದ್ಧಿಸುವಂತೆ ಮಾಡಲು ವಿಜಯರಾಜ್ ತಾಂತ್ರಿಕ ಸಲಹೆ ನೀಡಿದರು. ಗುರುನಾಗೇಶ್ ಸ್ಥಳೀಯ ನಿವಾಸಿ
ಸಂಘ-ಸಂಸ್ಥೆಗಳ ಸಹಭಾಗಿತ್ವ: ರೋಟರಿ ಕ್ಲಬ್‌ಗಳ ಕಲ್ಯಾಣಿ ಪುನಶ್ಚೇತನ ಕಾರ್ಯಕ್ಕೆ ಆನೇಕಲ್ ಸಂಕ್ರಮಣ ಬಳಗ, ಸುಭಾಷ್ ಸೇವಾ ಸಂಸ್ಥೆ, ಗಮನ ಸಂಸ್ಥೆ, ಗಂಧದನಾಡು ಜನಪರ ವೇದಿಕೆ, ಜಾಗೃತ ಯುವ ಭಾರತ್, ಸುಭಾಷ್ ಚಿತ್ರಕಲಾ ತಂಡ, ವಿಶ್ವಚೇತನ ಕಾಲೇಜ್ ವಿದ್ಯಾರ್ಥಿಗಳು ಸಹಕರಿಸಿದ್ದಾಗಿ ವಕೀಲ ಪುರುಷೋತ್ತಮ್ ಮಾಹಿತಿ ನೀಡಿದರು.