ಪುನರ್‌ವ್ಯಾಖ್ಯಾನಕ್ಕೆ ಒಳಗಾಗುತ್ತಿರುವ ರಾಮಾಯಣ-ಮಹಾಭಾರತ

ಪುನರ್‌ವ್ಯಾಖ್ಯಾನಕ್ಕೆ ಒಳಗಾಗುತ್ತಿರುವ ರಾಮಾಯಣ-ಮಹಾಭಾರತ
Published on

ಹಾಸನ: ರಾಮಾಯಣ-ಮಹಾಭಾರತಗಳಂತೆ ಜಗತ್ತಿನ ಮತ್ಯಾವ ಮಹಾಕಾವ್ಯವೂ ಪುನರ್‌ಸೃಷ್ಟಿ ಮತ್ತು ಪುನರ್‌ವ್ಯಾಖ್ಯಾನಕ್ಕೆ ಒಳಗಾಗುತ್ತಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಅವರು ಅಭಿಪ್ರಾಯಪಟ್ಟರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಮಹಾಕಾವ್ಯಗಳ ಸಂಖ್ಯೆ ಬೆರಳೆಣಿಕೆಯಷ್ಟು. ವಾಲ್ಮೀಕಿ ರಚಿಸಿದ ರಾಮಾಯಣ ಮತ್ತು ವ್ಯಾಸ ರಚಿಸಿದ ಮಹಾಭಾರತ ಎರಡೂ ಜೀವನದ ವಾಸ್ತವ, ಕನಸು, ಕಲ್ಪನೆ, ಆದರ್ಶ ಎಲ್ಲವನ್ನೂ ಕಟ್ಟಿಕೊಟ್ಟಿವೆ. ರಾಮ ಆದರ್ಶ ಪುರುಷ, ರಾವಣ ಆದರ್ಶ ರಾಕ್ಷಸ ಹೀಗೆ ವಾಲ್ಮೀಕಿ ರಾಮಾಯಣದಲ್ಲಿ ಆದರ್ಶ ಪಾತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ವಾಲ್ಮೀಕಿ ರಕ್ಕಸರೊಳಗೆ ಮಾನವರನ್ನು ಹುಡುಕಿದರೆ, ವ್ಯಾಸ ಮಾನವರೊಳಗೆ ರಕ್ಕಸರನ್ನು ಹುಡುಕುವ ಪ್ರಯತ್ನವನ್ನು ತಮ್ಮ ಮಹಾಕಾವ್ಯದಲ್ಲಿ ಮಾಡಿದ್ದಾರೆ ಎಂದು ತಿಳಿಸಿದರು.
ವಾಲ್ಮೀಕಿಯ ಬದುಕಿನಲ್ಲಾದ ಪರಿವರ್ತನೆ ಇಂದಿಗೂ ಸಾಧ್ಯ ಎಂದು ನಿರೂಪಿಸಿದ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಒಬ್ಬ ಅತ್ಯಂತ ಅನಾಗರಿಕ ಬದುಕು ಬದುಕುತ್ತಿದ್ದ ವ್ಯಕ್ತಿ ಆದರ್ಶ ಕಾವ್ಯ ಕಟ್ಟಿಕೊಡಬಹುದು ಎಂಬುದಕ್ಕೆ ವಾಲ್ಮೀಕಿಯೇ ನಿದರ್ಶನ. ರಾಮಾಯಣ ಮತ್ತು ಮಹಾಭಾರತಕ್ಕೆ ಮಹಾಕವಿಗಳನ್ನು ಹುಟ್ಟು ಹಾಕುವ ಸಾಮರ್ಥ್ಯವಿದೆ. ಇದಕ್ಕೆ ರಾಮಾಯಣ ದರ್ಶನಂ ಬರೆದ ಕುವೆಂಪು ಅವರೇ ನಿದರ್ಶನ. ರಾಮಾಯಣ-ಮಹಾಭಾರತ ಕಾವ್ಯಗಳು ಓದದೆ ಇರುವ ಜನಸಾಮಾನ್ಯರ ಹೃದಯದಲ್ಲೂ ಸ್ಥಾನ ಪಡೆದಿವೆ. ವಾಲ್ಮೀಕಿ ಎಲ್ಲರ ಎದೆಯೊಳಗೂ ಸ್ಥಾನ ಪಡೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ, ನಿರ್ದೇಶಕ ಡಾ.ಎಸ್.ಪ್ರದೀಪ್, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net