

ಆಲಮೇಲ: ಮುಳಗಡೆಯ ಹಣೆಪಟ್ಟಿ ಕಟ್ಟಿಕೊಂಡಿರುವ ಹಳೇ ತಾವರಖೇಡ ಗ್ರಾಮದ ಪುನರ್ವಸತಿ ಕೇಂದ್ರವು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷೃದಿಂದ ಸೌಲಭ್ಯಗಳಿಂದ ವಂಚಿತವಾಗಿದೆ. ಕೂಡಲೇ ಪುನರ್ವಸತಿ ಕೇಂದ್ರಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ, ಹಕ್ಕುಪತ್ರಗಳನ್ನು ವಿತರಿಸುವ ಕೆಲಸವಾಗಬೇಕು. ನಿರ್ಲಕ್ಷಿಸಿದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಅನಿವಾರ್ಯ ಎಂದು ಶಾಸಕ ಅಶೋಕ ಮನಗೂಳಿ ಎಂದು ಎಚ್ಚರಿಸಿದರು.
ಕಂದಾಯ ಇಲಾಖೆಯ ವತಿಯಿಂದ ಶನಿವಾರ ತಾವರಖೇಡ ಗ್ರಾಮದ ಹನುಮಾನ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾವರಖೇಡ ಗ್ರಾಮಕ್ಕೆ ಸರ್ಕಾರದಿಂದ ಒಟ್ಟು 648 ನಿವೇಶನಗಳು ಮಂಜೂರಾಗಿವೆ. ಇದರಲ್ಲಿ 429 ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ನಿಡಲಾಗುವುದು. ಶೀಘ್ರದಲ್ಲಿ ಸರ್ಕಾರದಿಂದ ಪುರ್ನವಸತಿ ಕೇಂದ್ರಕ್ಕೆ ಮೂಲ ಸೌಲಭ್ಯ ಒದಗಿಸಲಾಗುವುದು. ಹಕ್ಕುಪತ್ರ ಪಡೆದ ಕುಟುಂಬಗಳು ತಮ್ಮ ನಿವೇಶನಗಳಲ್ಲಿ ವಾಸಿಸಬೇಕು. ಸದ್ಯ ಕುಡಿಯುವ ನೀರಿಗಾಗಿ ಸರ್ಕಾರದಿಂದ 50 ಲಕ್ಷ ರೂ. ವೆಚ್ಚದಲ್ಲಿ ಕೊಳವೆಭಾವಿ ಕೊರೆಯಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಸ್ಥಳಾಂತರಗೊಂಡ ಕುಟುಂಬಗಳಿಗೆ ಸರ್ಕಾರದಿಂದ ಸ್ಥಳಾಂತರ ವೆಚ್ಚವಾಗಿ 25ಸಾವಿರ ರೂ. ನಿಗದಿಯಾಗಿದೆ. ಮುಂದಿನ ದಿನಮಾನದಲ್ಲಿ ಸರ್ಕಾರದಿಂದ ಹೆಚ್ಚುವರಿಯಾಗಿ 25ಸಾವಿರ ರೂ.ಗಳನ್ನು ಕೊಡಿಸುವಂತಹ ಪ್ರಯತ್ನ ಮಾಡಲಾಗುವುದು ಎಂದರು.
ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ, ಪ್ರವಾಹಪೀಡಿತ ಕುಟುಂಬಗಳು ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸಲು ಆರಂಭಿಸಿ ಹಂತಹಂತವಾಗಿ ಎಲ್ಲ ಮೂಲ ಸೌಲಭ್ಯಗಳು ದೊರೆಯಲು ಸಾಧ್ಯ ಎಂದರು.
ತಾಪಂ ಇಒ ಬಾಬು ರಾಠೋಡ, ತಹಸೀಲ್ದಾರ ಸುರೇಶ ಚಾವಲರ, ನೀರಾವರಿ ಇಲಾಖೆಯ ಎಇಇ ಸಂತೋಷಕುಮಾರ ಪಾಟೀಲ, ಎಇ ಅರುಣಕುಮಾರ, ಪಿಎಸ್‌ಐ ಕುಮಾರ ಹಾಡಕಾರ, ಶಿರಸ್ತೇದಾರ ಪಿ.ಎಸ್. ಮುಕಿಹಾಳ, ಕಂದಾಯ ನಿರೀಕ್ಷಕ ಎಂ.ಎ. ಅತ್ತಾರ, ಗ್ರಾಮಸ್ಥರಾದ ಮಲ್ಲು ಭೋಗಂಡಿ, ಗೌಡಪ್ಪ ಬಗಲಿ, ರೇವಣಸಿದ್ಧ ಅಪಝಲಪುರ, ಸಿದ್ದು ಶಿವಗೊಂಡ ಇತರರಿದ್ದರು.
ನಮ್ಮ ಗ್ರಾಮದ ದಶಕದ ಸಮಸ್ಯೆಗೆ ಹಿಂದಿನ ಹಲವು ಶಾಸಕರಿಂದ ಸಾಧ್ಯವಾಗದೇ ಇಲ್ಲಿಯವರೆಗೆ ಬಂದಿದೆ. ಶಾಸಕ ಅಶೋಕ ಮನಗೂಳಿಯವರು ಸ್ಪಂದಿಸಿ, ಸಮಸ್ಯೆ ಬಗೆಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಗೌಡಪ್ಪ ಬಗಲಿ, ತಾವರಖೇಡ ಗ್ರಾಮಸ್ಥ.