ಪುತ್ತೂರು ಬಾಲವನ ಅಭಿವೃದ್ಧಿಗೆ ಕುಪ್ಪಳ್ಳಿ ಮಾದರಿ ಸಮಿತಿ, ಸ್ಥಳೀಯರಿಗೆ ಹೆಚ್ಚು ಪ್ರಾಧಾನ್ಯ ಬಗ್ಗೆ ಸಚಿವರ ಗಮನ ಸೆಳೆಯಲು ಬಾಲವನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ನಿರ್ಣಯ

ptr_11 oct balavana
ಪರ್ಲಡ್ಕದಲ್ಲಿರುವ ಡಾ.ಶಿವರಾಮ ಕಾರಂತರ ಬಾಲವನ
Published on

ಪರ್ಲಡ್ಕದಲ್ಲಿರುವ ಡಾ.ಶಿವರಾಮ ಕಾರಂತರ ಬಾಲವನವನ್ನು ಕುಪ್ಪಳ್ಳಿ ಮಾದರಿಯಂತೆ ಏಕ ಸಮಿತಿ ರಚಿಸಿ ಸ್ಥಳೀಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕೆಂಬ ಕುರಿತು ಸಚಿವರ ಗಮನಕ್ಕೆ ತರಲು ಬಾಲವನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಶುಕ್ರವಾರ ಬಾಲವನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಬಾಲವನ ಅಭಿವೃದ್ಧಿಗೆ ಸಂಬಂಧಿಸಿ ಎರಡು ಸಮಿತಿಗಳ ಅವಶ್ಯಕತೆ ಇಲ್ಲದಿರುವ ಬಗ್ಗೆ ಕನ್ನಡ, ಸಂಸ್ಕೃತಿ ಸಚಿವರ ಗಮನಕ್ಕೆ ತರಲಾಗಿದೆ. ಸ್ಥಳೀಯರನ್ನು ಸೇರಿಸಿ ರಾಜ್ಯಮಟ್ಟದ ಒಂದೇ ಸಮಿತಿ ರಚಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ ಎಂದು ಶಾಸಕರು ಪ್ರಸ್ತಾಪಿಸಿದರು. ಈ ಕುರಿತು ಸರ್ವ ಸಮ್ಮತದ ತೀರ್ಮಾನ ತೆಗೆದುಕೊಂಡು ಅಭಿವೃದ್ಧಿ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
ಸಮಿತಿ ಸದಸ್ಯ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಈಜಕೊಳದಿಂದ ಬಾಲವನಕ್ಕೆ ಜನ ಬರುವಂತಾಗಿದೆ. ಅದನ್ನು ಉಳಿಸಿಕೊಂಡು ಬಾಲವನದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದರು. ಇತರೆ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.
ಬಾಲವನ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಸಹಾಯಕ ಕಮಿಷನರ್ ಗಿರೀಶ್ ನಂದನ್, ತಹಸೀಲ್ದಾರ್ ರಮೇಶ್‌ಬಾಬು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯೆ ದೀಕ್ಷಾ ಪೈ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಡಾ.ಅಶ್ವಿನಿ ಕೃಷ್ಣಮೂರ್ತಿ, ಡಾ.ವರದರಾಜ ಚಂದ್ರಗಿರಿ, ಪ್ರತಿಮಾ ಹೆಗ್ಡೆ, ಮಾಸ್ಟರ್ ಪ್ಲ್ಯಾನರಿಯ ಆನಂದ ಕುಮಾರ್ ಎಸ್.ಕೆ., ಅಕ್ಷಯ್ ಎಸ್.ಕೆ ಉಪಸ್ಥಿತರಿದ್ದರು.

ತಿಂಗಳಿಗೊಂದರಂತೆ ಕಾರ್ಯಕ್ರಮ
ಬಾಲವನದಲ್ಲಿ ತಿಂಗಳಿಗೊಂದರಂತೆ ಕಾರ್ಯಕ್ರಮ ಏರ್ಪಡಿಸುವುದು ಅಗತ್ಯ. ಈಗಾಗಲೇ ಕಾರ್ಯಕ್ರಮ ನಡೆಯುತ್ತಿದೆ. ಅದನ್ನು ಇನ್ನಷ್ಟು ವಿಸ್ತರಿಸಲು ಆಡಳಿತ ನಿರ್ವಹಣೆ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ಅಧಿಕಾರಿ ನೇಮಕ ಇತ್ಯಾದಿಗಳ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು. ಕಾರಂತರ ವಿಚಾರಧಾರೆಗಳಿಗೆ ತಕ್ಕಂತೆ ಕಾರ್ಯಕ್ರಮ ಏರ್ಪಡಿಸಿ ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಹ್ವಾನ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net