

ಎನ್.ಆರ್.ಪುರ: ಮನುಷ್ಯನಾಗಿ ಜನಿಸಬೇಕಾದರೆ ಪೂರ್ವಜನ್ಮದಲ್ಲಿ ಪುಣ್ಯ ಸಂಪಾದನೆ ಮಾಡಿರಬೇಕು ಎಂದು ಹರಿಹರಪುರ ಮಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಬುಧವಾರ ಕಾನೂರು ಗ್ರಾಮದ ಕೆರೆಮನೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 42ನೇ ವಷರ್ದ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಜಗತ್ತಿನ ಜೀವ ಸಂಕುಲದಲ್ಲಿ ಮನುಷ್ಯನಿಗೆ ಉನ್ನತ ಸ್ಥಾನವಿದೆ. ಜನ್ಮವನ್ನು ಹೇಗೆ ಸಾರ್ಥಕ ಪಡಿಸಿಕೊಳ್ಳಬಹುದು ಎಂಬ ವಿವೇಕ ಮನುಷ್ಯನಿಗೆ ಇದೆ. ಆದ್ದರಿಂದ ಉತ್ತಮವಾಗಿ ಬದುಕಬೇಕು ಎಂದರು.
ಕಾಲ ಕಾಲಕ್ಕೆ ಮನಸ್ಸಿಗೂ ಉತ್ತಮ ಆಹಾರ ನೀಡಬೇಕು. ಮನಸ್ಸು ಸರಿಯಾಗಿ ಇಲ್ಲದಿದ್ದರೆ ಕಾಯಿಲೆ ಬರುತ್ತದೆ. ನಿದ್ದೆ ಸರಿಯಾಗಿ ಬರುವುದಿಲ್ಲ. ಸಣ್ಣ ವಿಚಾರಕ್ಕೂ ಮನೆಯೊಳಗೆ ಮನಸ್ತಾಪ ಜಾಸ್ತಿಯಾಗುತ್ತದೆ. ಪ್ರಕೃತಿ ವಿರುದ್ಧವಾಗಿ ನಡೆದುಕೊಳ್ಳಬಾರದು. ಇಂದ್ರಿಯಗಳನ್ನು ನಿಗ್ರಹ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹರಿಹರಪುರ ಮಠದ ಸ್ವಾಮೀಜಿ ಆಪ್ತ ಕಾರ್ಯದರ್ಶಿ ರಘುನಾಥಶಾಸ್ತ್ರೀ ಮಾತನಾಡಿ, ಸನಾತನ ಧರ್ಮದಲ್ಲಿ ದೇವರ ಬಗ್ಗೆ ಹೆಚ್ಚು ಜ್ಞಾನ ಪಡೆದಿದ್ದ ಶಂಕರ ಭಗವಾತ್ಪಾದರು ದೇವರ ನಾಡಾದ ಕೇರಳ ರಾಜ್ಯದಲ್ಲಿ ಜನಿಸಿದ್ದರು. 2009ರಲ್ಲಿ ಕೆರೆಮನೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹರಿಹರಪುರ ಶ್ರೀಗಳು ಬಂದು ಭಕ್ತರಿಗೆ ಶಿವದೀಕ್ಷೆ ನೀಡಿ ಆಶೀರ್ವಚನ ನೀಡಿದ್ದರು. ಜ.10ರಂದು ಹರಿಹರಪುರ ಮಠದಲ್ಲಿ ವೈಕುಂಠ ಏಕಾದಶಿ ಆರಾಧನೆ ನಡೆಯಲಿದೆ. ಏಕಾದಶಿ ಆರಾಧನೆ ಪ್ರತಿ ವರ್ಷ ಒಂದು ಬಾರಿ ಮಾತ್ರ ನಡೆಯಲಿದೆ. ಎಲ್ಲ ಭಕ್ತರೂ ಆಗಮಿಸಬೇಕು ಎಂದು ಮನವಿ ಮಾಡಿದರು.
ಸನಾತನ ಹಿಂದು ಪರಿಷತ್ ಮುಖ್ಯಸ್ಥ ಅರವಿಂದ ಸೋಮಯಾಜಿ ಮಾತನಾಡಿ, 42 ವರ್ಷದಿಂದಲೂ ಕೆರೆಮನೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಜ.8ರಂದು ದೀಪೋತ್ಸವ ನಡೆಸಲಾಗುತ್ತಿದೆ. ಹರಿಹರಪುರ ಸ್ವಯಂ ಪ್ರಕಾಶ ಸರಸ್ವತಿ ಸ್ವಾಮೀಜಿ ಅವರು ಜಾತಿ, ಧರ್ಮ ಭೇದ ಇಲ್ಲದೆ ಎಲ್ಲ ಕಡೆ ಧರ್ಮವನ್ನು ಪಸರಿಸುತ್ತಿದ್ದಾರೆ. ಈಗ ಜನರಿಗೆ ಹಣದ ಕೊರತೆ ಇಲ್ಲ. ಆದರೆ ಸಮಯದ ಕೊರತೆ ಕಾಣುತ್ತಿದೆ. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಕೆರೆಮನೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ ಗಣಪತಿ ಪೂಜೆ, ಗಣಹೋಮ, ಮೂಡುಗಣಪತಿ, ಕಲಾ ಹೋಮ, ಕಲಶಾಭಿಷೇಕ ಪೂಜೆ ನಡೆಯಿತು. ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಾಳಿಗ ಪುರತ್ತಮ್ಮ ದೇವಿಗೆ ಸಹಸ್ರನಾಮ ಕುಂಕುಮಾರ್ಚನೆ, ಶ್ರೀ ಚೌಡೇಶ್ವರಿ ದೇವರಲ್ಲಿ ಸಪ್ತಶತಿ ಪಾರಾಯಣ, ಶ್ರೀ ನಾಗದೇವರಿಗೆ ಪವಮಾನಾಭಿಷೇಕ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಶ್ರೀ ಸಿದ್ಧಿ ವಿನಾಯಕ ಚಂಡೆ ಬಳಗದ ಸೇವೆಯೊಂದಿಗೆ ಕಾನೂರಿನ ಸಿದ್ಧಿವಿನಾಯಕ ದೇವಸ್ಥಾನದಿಂದ ಜ್ಯೋತಿಯನ್ನು ಮೆರವಣಿಗೆ ಮೂಲಕ ತರಲಾಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ದೀಪಾರಾಧನೆ, ತಣ್ಣಿರಪ್ಪ, ದೇವಿ ಮೆರವಣಿಗೆ ನಡೆಯಿತು.
ಹರಿಹರಪುರ ಶ್ರೀಗಳನ್ನು ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಶ್ರೀಗಳು ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳಿ ಕುಂಭಾಭಿಷೇಕ ನೆರವೇರಿಸಿದರು. ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.