

ಹರಪನಹಳ್ಳಿ: ಎಲ್ಲ ವರ್ಗದ ಜನರ ಸಹಕಾರವಿದ್ದರೆ ಯಾವುದೇ ಕೆಲಸವನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದಲ್ಲಿ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ 41 ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಬುಧವಾರ ಮಾತನಾಡಿದರು. ಗ್ರಾಮದ ಜನತೆ ಸಹಕಾರದಿಂದ ನಿರಂತರವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗಿದ್ದು, ಈ ಪುಣ್ಯದ ಕೆಲಸದಲ್ಲಿ ಭಾಗಿಯಾದ ಎಲ್ಲರಿಗೂ ದೇವರ ಅನುಗ್ರಹ ಸದಾ ಇರಲಿದೆ ಎಂದರು.
ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ. ಪತಿ-ಪತ್ನಿಯರಲ್ಲಿ ಪ್ರೀತಿ, ಪ್ರೇಮ, ನಂಬಿಕೆ, ವಿಶ್ವಾಸ ಹಾಗೂ ಹೊಂದಾಣಿಕೆಯೊಂದಿಗೆ ಆತ್ಮಗೌರವವಿರಬೇಕು. ಬಸವಣ್ಣ ಅವರ ತತ್ವ-ಸಿದ್ಧಾಂತಗಳಲ್ಲಿ ಒಂದಾದ ಕಾಯಕವೇ ಕೈಲಾಸ ಮಾತನ್ನು ಶಾಂತಲಿಂಗ ದೇಶೀಕೇಂದ್ರ ಗುರುಗಳು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಡಾ.ಎಸ್.ಎಂ.ಮಹೇಶ್ ಅವರಿಗೆ ಕೋಲಶಾಂತೇಶ್ವರ ಮಠದ ವತಿಯಿಂದ ಗುರುಕಿರಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೃತ್ತಿರಂಗಭೂಮಿಯಲ್ಲಿನ ಸಾಧನೆಗಾಗಿ ಡಾ.ಕೆ.ನಾಗರತ್ನಮ್ಮ ಅವರಿಗೆ ಕೋಲಶಾಂತೇಶ್ವರ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಮುಖರಾದ ಅಣ್ಣಪ್ಪ, ಪ್ರಶಾಂತ ಪಾಟೀಲ್, ಲಲಿತಮ್ಮ, ಶಿವಕುಮಾರ, ಕೆರೆಗುಡಿಹಳ್ಳಿ ಪ್ರಶಾಂತ ಪಟೀಲ, ಕೊಟ್ರಯ್ಯ, ಗುರುಪ್ರಸಾದ್, ಲಕ್ಷ್ಮೀದೇವಿ, ಬಸಾಪುರ ಮಂಜುನಾಥ, ಸಲಾಂ ಸಾಹೇಬ್, ಕೆ.ಮಹಾಂತೇಶ್, ಇಟಗಿಹಳ್ಳಿ ಬಸವರಾಜ್ ಇದ್ದರು.