ಪುಣ್ಯಕ್ಷೇತ್ರ ದರ್ಶನದಿಂದ ಜೀವನ ಪಾವನ

26 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬರು ಜೀವನದಲ್ಲಿ ಪುಣ್ಯಕ್ಷೇತ್ರಗಳಿಗೆ ಹೋಗಿ ದರ್ಶನ ಪಡೆಯುವುದರಿಂದ ಅವರ ಬದುಕು ಪಾವನವಾಗುತ್ತದೆ ಎಂದು ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಹೇಳಿದರು.
ನಗರದ ವೀರಶೈವ ಜಂಗಮ ಸಂಸ್ಥೆಯ ಪಂಚಪೀಠ ದರ್ಶನ ಪ್ರವಾಸ ಕಾರ್ಯಕ್ರಮದಡಿ ಶನಿವಾರ ಆಯೋಜಿಸಿದ್ದ ಬಾಳೆಹೊನ್ನೂರು ರಂಭಾಪುರಿ ಶ್ರೀ ಪೀಠ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಧರ್ಮಿಯರಿಗೂ ಗುರು, ಕ್ಷೇತ್ರಗಳಿರುತ್ತವೆ. ತಪ್ಪದೆ ಒಮ್ಮೆಯಾದರೂ ಭೇಟಿ ನೀಡಿ, ಭಕ್ತಿ ಸೇವೆ ಮಾಡಬೇಕು. ಪವಿತ್ರ ಶ್ರಾವಣ ಮಾಸದಲ್ಲಿ ಗುರು, ದೇವರ ಸಾನ್ನಿಧ್ಯ ಬಯಸುವುದರಿಂದ ಜೀವನ ಕ್ರಮ ಶುದ್ಧವಾಗುತ್ತದೆ. ಶ್ರಾವಣ ಮಾಸ ವೀರಶೈವ ಲಿಂಗಾಯತರಿಗೆ ಬಹು ಮುಖ್ಯ. ಪೂಜಾನಿಷ್ಠರು ಈ ಮಾಸದಲ್ಲಿ ಕಠಿಣ ಪರಿಶ್ರಮದಿಂದ ಸಾಧನೆ ಮಾಡುತ್ತಾರೆ. ಸಾತ್ವಿಕ ಜೀವನ ವೀರಶೈವರಿಗೆ ಆಧ್ಯಾತ್ಮಿಕ ಶಕ್ತಿ ನೀಡುತ್ತದೆ ಎಂದರು.
ಬಸವರಾಜ ಕೌಜಲಗಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ ರಕ್ಷಣೆಗೆ ಸದಾ ಸಂಚರಿಸಿ, ಶ್ರಮಿಸುತ್ತಿರುವ ಪಂಚಪೀಠಾಧೀಶ್ವರರು ನೆಲೆಸಿದ ಕ್ಷೇತ್ರಗಳು ಅತ್ಯಂತ ಪವಿತ್ರವಾಗಿವೆ. ಅವರ ಜಪತಪಗಳ ಫಲವಾಗಿ ಸದ್ಧರ್ಮದ ಸಂವರ್ಧನೆ ಆಗುತ್ತಿದೆ. ಬಾಳೆಹೊನ್ನೂರು ರಂಭಾಪುರಿ ಶ್ರೀ ಪೀಠ ಜಾಗೃತ ಕ್ಷೇತ್ರ. ರೇಣುಕರ ದರ್ಶನ, ಜಗದ್ಗುರುಗಳ ಆಶೀರ್ವಾದ ಪಡೆಯುವುದರಿಂದ ಬದುಕು ಸುಂದರವಾಗುತ್ತದೆ ಎಂದರು.
ಸಂಸ್ಥೆಯ ಹಿರಿಯ ನಿರ್ದೇಶಕ ಡಾ. ಎಸ್.ಜಿ. ಮಠದ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಎಂ.ಹಿರೇಮಠ, ಪಿ.ಎಸ್. ಹಿರೇಮಠ, ವೇದಮೂರ್ತಿ ಬಸಯ್ಯ ಹಿರೇಮಠ, ಚಿದಾನಂದಯ್ಯ ಹಿರೇಮಠ, ಕುಮಾರ ಕಡ್ಲಿಮಠ, ಸಿ.ಸಿ. ಹಿರೇಮಠ, ವೆಂಕಟೇಶ ಎಚ್., ಮಹಾಂತೇಶ ಬೆಳಹಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net