‘ಪುಣ್ಯಕೋಟಿ’ ಯೋಜನೆಗೆ ಕೈಜೋಡಿಸಿದ ನೌಕರರು

Rajendrakumar Gandge
Published on

ಬೀದರ್: ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ದೇಣಿಗೆ ಹಣ ಕಡಿತಗೊಳಿಸುವ ಮೂಲಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪುಣ್ಯಕೋಟಿ ದತ್ತು ಯೋಜನೆಗೆ ಕೈಜೋಡಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನದ ರೂ. 70 ಲಕ್ಷ ಹಾಗೂ ಅನುದಾನಿತ ಶಾಲಾ, ಕಾಲೇಜುಗಳ ನೌಕರರ ದೇಣಿಗೆ ಹಣ ಸೇರಿದಂತೆ ಜಿಲ್ಲೆಯಲ್ಲಿ ಯೋಜನೆಗೆ ಸುಮಾರು ರೂ. 1 ಕೋಟಿ ದೇಣಿಗೆ ಸಂಗ್ರಹವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.
ಯೋಜನೆಗೆ ನವೆಂಬರ್‍ನಲ್ಲಿ ರೂ. 26,44,800 ಹಾಗೂ ಡಿಸೆಂಬರ್‍ನಲ್ಲಿ ರೂ. 43,61,400 ಸೇರಿದಂತೆ ಒಟ್ಟು ರೂ. 70,06,200 ಸಂಗ್ರಹವಾಗಿದೆ. ಈ ಪೈಕಿ ಔರಾದ್ ತಾಲ್ಲೂಕಿನಿಂದ 8,62,700, ಬಸವಕಲ್ಯಾಣದಿಂದ ರೂ. 12,03,900, ಭಾಲ್ಕಿಯಿಂದ 10,06,800, ಬೀದರ್‍ನಿಂದ ರೂ. 26,68,200, ಚಿಟಗುಪ್ಪದಿಂದ ರೂ. 2,44,800, ಹುಮನಾಬಾದ್‍ನಿಂದ ರೂ. 7,73,200, ಕಮಲನಗರದಿಂದ ರೂ. 1,82,400 ಹಾಗೂ ಹುಲಸೂರು ತಾಲ್ಲೂಕಿನಿಂದ ರೂ. 64,200 ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.
ಎ ದರ್ಜೆ ನೌಕರರು ಯೋಜನೆಗೆ ರೂ. 11 ಸಾವಿರ, ಬಿ ದರ್ಜೆ ನೌಕರರು ರೂ. 4 ಸಾವಿರ ಹಾಗೂ ಸಿ ದರ್ಜೆ ನೌಕರರು ರೂ. 400 ದೇಣಿಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ನೌಕರರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದೆ. ಹೀಗಾಗಿ ಸರ್ಕಾರದ ಯೋಜನೆಗೆ ಕೈಜೋಡಿಸುವುದು ನೌಕರರ ಕರ್ತವ್ಯವಾಗಿದೆ. ದೇಣಿಗೆ ನೀಡುವ ಮೂಲಕ ಸರ್ಕಾರದ ಆಶಯ ಸಾಕಾರಕ್ಕೆ ಸಹಕರಿಸಿದ ಜಿಲ್ಲೆಯ ನೌಕರರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net