

ಹಾಸನ: ಗೋಶಾಲೆಗಳಲ್ಲಿನ ಗೋವುಗಳನ್ನು ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ಯೋಜನೆ ಅತ್ಯಂತ ಮಾನವೀಯ ಉದ್ದೇಶದ ಮಹತ್ವಪೂರ್ಣ ಯೋಜನೆ ಆಗಿದ್ದು ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಆನಂದ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಪುಣ್ಯಕೋಟಿ ಯೋಜನೆ ಯಶಸ್ಸಿಗೆ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.
ಗೋಶಾಲೆಗೆ ನಿಗದಿಯಾಗಿರುವ ಅನುದಾನವನ್ನು ವಿವಿಧ ಗೋಶಾಲೆಗಳಿಗೆ ವರ್ಗಾಯಿಸುವುದು, ಗೋಶಾಲೆ ಕಾಮಗಾರಿ/ ನಿರ್ವಹಣೆ ವೆಚ್ಚ ಅನುಮೋದಿಸುವುದು, ಅರಸೀಕೆರೆ ತಾಲೂಕು ಬೋರನಕೊಪ್ಪಲು ಗ್ರಾಮದ ಪುಣ್ಯಕೋಟಿ ಸರ್ಕಾರಿ ಗೋಶಾಲೆಗೆ ಮೇವು ಪೂರೈಕೆ ಹಾಗೂ ಚನ್ನಪಟ್ಟಣ ಮತ್ತು ಬೇಲೂರು ಗೋಶಾಲೆಗಳ ನಿರ್ಮಾಣ ಕಾರ್ಯ ಪ್ರಗತಿ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಅಬ್ಬನಘಟ್ಟದ ಅಮೃತ ಮಹಲ್ ಕಾವಲ್ ಗೋಶಾಲೆಯ ಕಿರು ವಿಡಿಯೋ ಚಿತ್ರ ಪ್ರದರ್ಶಿಸಲಾಯಿತು. ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ರಮೇಶ್ ಅವರು ಗೋಶಾಲೆ ಅಭಿವೃದ್ಧಿ ಕುರಿತು ವಿವರ ಒದಗಿಸಿದರು.
ಚನ್ನರಾಯಪಟ್ಟಣ ರಾಯಸಮುದ್ರ ಹಾಗೂ ಬೇಲೂರು ತಾಲೂಕಿನ ಹಳೇಬೀಡು ಹೋಬಳಿ ಸಿದ್ದಾಪುರ ಗ್ರಾಮದಲ್ಲಿ ಉದ್ದೇಶಿತ ಗೋಶಾಲೆ ಪ್ರಾರಂಭಕ್ಕೆ ಕೈಗೊಂಡಿರುವ ಕ್ರಮಗಳು ಮತ್ತು ಕಾಮಗಾರಿ ಪ್ರಗತಿ ವಿವರಿಸಿದರು.
ಮುಂಬರುವ ಬೇಸಿಗೆಗೆ ತಾತ್ಕಾಲಿಕ ಗೋ ಶಾಲೆಗಳ ಪ್ರಾರಂಭಕ್ಕೆ ಅನುದಾನ ಕಾಯ್ದಿರಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಗೋಶಾಲೆಗಳಿಗೆ ದೇಣಿಗೆ ನೀಡುವವರಿಗೆ ಆದಾಯ ತೆರಿಗೆ 80ಎ ನಿಯಮದ ಅಡಿ ವಿನಾಯಿತಿ ನೀಡಲು ಅಗತ್ಯ ಕ್ರಮವಹಿಸಲು ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಬೇಕು. ಗೋವುಗಳ ಮಾರಾಟ ಮತ್ತು ಸಾಗಾಟದ ವೇಳೆ ರೈತರಿಗೆ ತೊಂದರೆ ಕೊಡಬಾರದು. ಆದರೆ ಕಳ್ಳತನ ಹಾಗೂ ಅಕ್ರಮ ಗೋಸಾಗಾಣಿಕೆಗೆ ಕಡಿವಾಣ ಹಾಕಬೇಕು ಎಂದು ಅಪರ ಜಿಲ್ಲಾಧಿಕಾರಿ ಆನಂದ್ ಸೂಚನೆ ನೀಡಿದರು.
ಮುದ್ದು ಪ್ರಾಣಿಗಳ ತಳಿ ಸಂವರ್ಧನೆ, ಮಾರಾಟಕ್ಕೆ ನೋಂದಣಿ ಅಗತ್ಯ:
ನಿಯಮಗಳನ್ನು ಮಾಡಿರುವ ನೈಜ ಉದ್ದೇಶ ಅರಿತು ಅದನ್ನು ಮಾನವೀಯ ನೆಲೆಗಟ್ಟಿನಲ್ಲಿ ಅನುಷ್ಠಾನಗೊಳಿಸಬೇಕು. ಯುವ ಸಮುದಾಯ ಪಶು ಸಂಗೋಪನೆ ಬಗ್ಗೆ ಒಲವು ಹೊಂದುವಂತೆ ಪ್ರೇರಣೆ ನೀಡಬೇಕು. ಮುದ್ದು ಪ್ರಾಣಿಗಳ ಮಾರಾಟ ಮಳಿಗೆ ಹಾಗೂ ನಾಯಿ ತಳಿ ಸಂವರ್ಧನೆಯಲ್ಲಿ ತೊಡಗಿದವರು ನೋಂದಣಿ ಮಾಡಿಸುವುದು ಅಗತ್ಯವಿದ್ದು, ಈ ಬಗ್ಗೆ ಪಶುಪಾಲನೆ ಇಲಾಖೆ ಜಾಗೃತಿ ಮೂಡಿಸಿ ನಿಯಮಾನುಸಾರ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಪ್ರಾಣಿಗಳ ಕಳೇಬರ ವಿಲೇವಾರಿಗೆ ವ್ಯವಸ್ಥೆ:
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮೃತ ಪ್ರಾಣಿಗಳ ದೇಹಗಳ ವಿಲೇವಾರಿಗೆ ಸೂಕ್ತ ಜಾಗ ಮೀಸಲಿರಿಸುವ ಅಗತ್ಯವಿದೆ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ರಮೇಶ್ ಮಾಡಿದ ಮನವಿಗೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ, ಈ ಸಂಬಂಧ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಪ್ರಾಣಿಗಳ ಕಳೇಬರಗಳನ್ನು ಪರಿಸರ ಸ್ವೀಕಾರ್ಹ ರೀತಿಯಲ್ಲಿ ವಿಲೇವಾರಿ ಮಾಡಲು ಸ್ಮಶಾನ ಮತ್ತು ದಹನಕಾರಗಳ ವ್ಯವಸ್ಥೆ ಮಾಡುವ ಬಗ್ಗೆ ಹಾಗೂ ಬೀದಿನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಮೋಹನ್ ಕುಮಾರ್, ಪಾರಸ್ ಜೈನ್, ಎಚ್.ಆರ್. ವೆಂಕಟೇಶ್, ಪ್ರೀತಮ್ ವಾಲ್ಟನ್, ರಾಘವೇಂದ್ರ, ಎಎಸ್ಪಿ ತಮ್ಮಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೆಶಕ ಪ್ರಕಾಶ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ, ನಗರಸಭೆ ಆಯುಕ್ತ ಪರಮೇಶ್ವರಪ್ಪ ಮತ್ತಿತರರು ಹಾಜರಿದ್ದರು.