

ಚಾಮರಾಜನಗರ: ಮಿಶ್ರ ಬೆಳೆ, ಬೆರಕೆ ಸೊಪ್ಪಿನ ಕೃಷಿಯ ಜ್ಞಾನದ ಗಣಿಯಾಗಿರುವ ತಾಯಿಗೆ ಇವರು ತಕ್ಕ ಮಗ. ಇದು ಕೃಷಿ ಕ್ಷೇತ್ರದ ಸಾಧನೆಗಾಗಿ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ತಾಲೂಕಿನ ಪಣ್ಯದಹುಂಡಿ ಗ್ರಾಮದ ಪುಟ್ಟೀರಮ್ಮನ ಮಗ ಶಿವಲಿಂಗೇಗೌಡರ ಪುರಾಣ.
ಸಾಹಿತಿ ಮತ್ತು ಪತ್ರಕರ್ತೆ ವಿ.ಗಾಯತ್ರಿ ಬರೆದಿರುವ ‘ಪುಟ್ಟೀರಮ್ಮನ ಪುರಾಣ’ ಕೃತಿಯು ಮಿಶ್ರ ಬೆಳೆ-ಬೆರಕೆ ಸೊಪ್ಪಿನ ವಿಸ್ಮಯ ಲೋಕವನ್ನು ಅವರದೇ ಮಾತಿನಲ್ಲಿ ಅನಾವರಣಗೊಳಿಸಿದರೆ, ಇವರ ಮಗ ಶಿವಲಿಂಗೇಗೌಡರ ಕಾರ್ಯ ಪುಟ್ಟೀರಮ್ಮನ ಪುರಾಣದ ಮುಂದುವರಿದ ಭಾಗದಂತಿದೆ. ವಯೋಸಹಜ ಕಾಯಿಲೆಗಳಿಂದ ಹಾಸಿಗೆ ಹಿಡಿದಿರುವ 90 ವರ್ಷದ ಪುಟ್ಟೀರಮ್ಮನ ನೆನಪಿನ ಶಕ್ತಿ ಇನ್ನೂ ಮಾಸಿಲ್ಲ. ಸಾಲು ಬೆಳೆ ಪದ್ಧತಿ, ಬೆಳೆ ಬಿತ್ತನೆ ಕ್ರಮ, ವಿವಿಧ ಸೊಪ್ಪುಗಳ ಹೆಸರುಗಳು, ಅವುಗಳಲ್ಲಿರುವ ಔಷಧೀಯ ಗುಣ, ಅಷ್ಟೇ ಯಾಕೆ ಸೊಪ್ಪಿನ ಹೆಸರಿಂದ ಕಟ್ಟಿದ ಹಾಡುಗಳು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾಡಿದ ಪದ, ಮದುವೆಗಳಲ್ಲಿ ಹೇಳುತ್ತಿದ್ದ ಸೋಬಾನೆ ಪದಗಳು ಇನ್ನೂ ನೆನಪಿನಲ್ಲೇ ಇವೆ.
ಇಳಿವಯಸ್ಸು ಪುಟ್ಟೀರಮ್ಮನನ್ನು ಒಂದೆಡೆ ಕೂರುವಂತೆ ಮಾಡಿಬಿಟ್ಟದೆ. ಬಿಎ ಓದಿರುವ ಇವರ ಮಗ ಶಿವಲಿಂಗೇಗೌಡ 1.5 ಎಕರೆಯಲ್ಲಿ ಕೃಷಿ ಮಾಡುತ್ತಿದ್ದರು. ಜಿಲ್ಲೆಯಲ್ಲಿ ರೇಷ್ಮೆ ವೈಭವವಿದ್ದ ಕಾಲದಲ್ಲಿ ರಾಸಾಯನಿಕ ಬಳಸಿ ರೇಷ್ಮೆ ಬೆಳೆದಿದ್ದರು. ಈ ಸಂದರ್ಭದಲ್ಲಿ ಇವರಿಗೆ ಇನ್ಸ್ಟಿಟ್ಯೂಟ್ ಾರ್ ಕಲ್ಚರಲ್ ರಿಸರ್ಚ್ ಆ್ಯಂಡ್ ಆ್ಯಕ್ಷನ್(ಇಕ್ರಾ) ಪರಿಚಯವಾಗಿ ಸಾವಯವ ವಿಧಾನದ ಜ್ಞಾನ ವೃದ್ಧಿಸಿತು. ತಾವು ಸಹ ಸಾವಯವ ಕೃಷಿ ಮಾಡಿದರು. ನಂತರ ಇದನ್ನು ಇತರ ರೈತರಿಗೆ ತಿಳಿಸಿಕೊಡಬೇಕೆಂದು ನಿರ್ಧರಿಸಿ ಇಕ್ರಾ ಮಾರ್ಗದರ್ಶನ ಮತ್ತು ತಾಯಿಯಿಂದಲೂ ಬಳುವಳಿಯಾಗಿ ಬಂದಿರುವ ಬೇಸಾಯ ಕಲೆಯನ್ನು ಹಳ್ಳಿ ಹಳ್ಳಿಗೆ ತಲುಪಿಸಲು ಶುರು ಮಾಡಿದರು.
ಅಂದಿನಿಂದ ಈವರೆಗೆ ಸುಮಾರು 25 ವರ್ಷಗಳಿಂದ ಊರೂರು ಸುತ್ತುತ್ತಾ ಸೇವಾ ಮನೋಭಾವದಿಂದ ಬೇರೆ ರೈತರಿಂದ ಸಾವಯವ ವಿಧಾನ ಮತ್ತು ಬಹು ಬೆಳೆ ಪದ್ಧತಿಯ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಇದು ಎಷ್ಟು ರೈತರನ್ನು ತಲುಪಿದೆ ಎಂದರೆ ಚಾಮರಾಜನಗರ, ನಂಜನಗೂಡು ತಾಲೂಕುಗಳ ಸುಮಾರು 1500 ರೈತರು ಶಿವಲಿಂಗೇಗೌಡರ ಮಾರ್ಗದರ್ಶನದಲ್ಲಿ ಕೃಷಿ ಮಾಡುತ್ತಿದ್ದಾರೆ. ಇಕ್ರಾ ಸಂಸ್ಥೆಯ ಮೂಲಕ ರೈತರಿಗೆ ಹಲವು ತರಬೇತಿಗಳನ್ನು ಆಯೋಜಿಸುತ್ತಿದ್ದಾರೆ. ಕ್ಷೇತ್ರೋತ್ಸವ, ರೈತರ ಸಭೆ, ಗ್ರಾಮಗಳಲ್ಲಿ ಸಾವಯವ ಕೃಷಿಕರ ಸಂಘಗಳ ಸ್ಥಾಪನೆ ಮಾಡಿ ವಿಷ ಮುಕ್ತ ಆಹಾರ ಬೆಳೆಯಲು ಪ್ರೇರಣೆ ನೀಡುತ್ತಿದ್ದಾರೆ.
ಸಾವಯವ ಕೃಷಿಕರ ಮಾಸ್ಟರ್:
ಪುಟ್ಟೀರಮ್ಮನ ಮಗ ಶಿವಲಿಂಗೇಗೌಡ ಸಾವಯವ ಕೃಷಿಕರ ಪಾಲಿಗೆ ಪಾಠ ಮಾಡುವ ಮಾಸ್ಟರ್ ರೀತಿ ಕಾಣುತ್ತಾರೆ. ರಾಸಾಯನಿಕ ಮುಕ್ತ ಕೃಷಿ ಮಾಡಿ ಎಂದು ಹೇಳುವುದು ಸುಲಭ. ಆದರೆ ಈ ಪದ್ಧತಿ ಅಳವಡಿಸಿಕೊಂಡ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಿರುವುದೇ ದೊಡ್ಡ ಸವಾಲು. ಆದರೆ ಲಾಪೇಕ್ಷೆ ಬಯಸದ ಶಿವಲಿಂಗೇಗೌಡರ ಮಾರ್ಗದರ್ಶನವಿದ್ದರೆ ಎಲ್ಲವೂ ಸಲೀಸು. ರೈತರ ಜಮೀನಿಗಳಿಗೆ ಸ್ವತಃ ಶಿವಲಿಂಗೇಗೌಡರೇ ಭೇಟಿ ನೀಡಿ ಕೃಷಿ ಪಾಠ ಮಾಡುತ್ತಾರೆ. ಉತ್ತಮವಾಗಿ ಕೃಷಿ ಮಾಡಲು ತಿಳವಳಿಕೆ ನೀಡುತ್ತಿದ್ದಾರೆ.
ರೋಗಬಾಧೆಗೆ ಪರಿಹಾರ ಹೇಳ್ತಾರೆ: ಬೆಳೆಗಳಿಗೆ ತಗುಲುವ ರೋಗಬಾಧೆಯನ್ನು ಹೋಗಲಾಡಿಸಲು ರಾಸಾಯನಿಕ ಔಷಧಿಗಳ ಮೇಲೆ ಅವಲಂಬಿತವಾಗುವುದೊಂದೇ ಮಾರ್ಗವಲ್ಲ. ಸಾವಯವ ವಿಧಾನದಲ್ಲೂ ರೋಗಬಾಧೆಗೆ ಮುಕ್ತಿ ನೀಡಿ ಉತ್ತಮ ಇಳುವರಿ ಪಡೆಯಬಹುದು ಎನ್ನುವುದಕ್ಕೆ ಶಿವಲಿಂಗೇಗೌಡ ಮಾರ್ಗದರ್ಶನ ನೀಡುತ್ತಿರುವ ರೈತರಿಗೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ. ಈ ಮಾದರಿಯಲ್ಲಿ ಕೃಷಿ ಮಾಡುತ್ತಿರುವವರು ಲಿತಾಂಶವನ್ನೂ ಕಂಡುಕೊಂಡಿದ್ದಾರೆ. ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಪರಿಸರಕ್ಕೆ ಉಪಯೋಗವಾಗುವಂತೆ ಸಾವಯವ ದ್ರವ ಗೊಬ್ಬರಗಳು ಮತ್ತು ಸಾವಯವ ಕೀಟ ನಾಶಕಗಳನ್ನು ತಯಾರಿಸುತ್ತಾರೆ. ಇದನ್ನು ರೈತರಿಗೂ ಹೇಳಿಕೊಡುತ್ತಿದ್ದಾರೆ. ಈ ವಿಧಾನವು ರೋಗಬಾಧೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಮಣ್ಣಿನ ಲವತ್ತತೆಯನ್ನೂ ಉತ್ತಮಗೊಳಿಸುತ್ತಿದೆ.
ಇಕ್ರಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಹಲವು ರೈತರಿಗೆ ಅರಿವು ಮೂಡಿಸುತ್ತಿದ್ದೇನೆ. ಸಾವಿರಕ್ಕೂ ಹೆಚ್ಚು ರೈತರು ಸಾವಯವ ಮತ್ತು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಸಾವಯವ ಕೃಷಿ ಶ್ರಮವನ್ನು ಬಯಸುತ್ತದೆ. ಅಷ್ಟೇ ಪ್ರಮಾಣದಲ್ಲಿ ಪ್ರತಿಲವನ್ನೂ ನೀಡುತ್ತದೆ. ಗುಣಮಟ್ಟದ ಆಹಾರವನ್ನು ಗ್ರಾಹಕರು ಬಯಸುತ್ತಾರೆ. ಹವಾಮಾನ ವ್ಯತ್ಯಾಸದಿಂದ ಒಂದು ಬೆಳೆ ಬಾರದಿದ್ದರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಯುವಕರಿಗೂ ಇದರ ಬಗ್ಗೆ ಅರಿವಿದೆ. ಆದರೆ ಸ್ವಾತಂತ್ರ್ಯ ಸಿಗುತ್ತಿಲ್ಲ. ಹಿರಿಯರು ಪ್ರೋತ್ಸಾಹ ನೀಡಿದರೆ ಯುವಕರೂ ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಾರೆ. ಶಿವಲಿಂಗೇಗೌಡ, ಪುಟ್ಟೀರಮ್ಮನ ಮಗ, ಪಣ್ಯದಹುಂಡಿ, ಚಾಮರಾಜನಗರ ನಾನು ಶಿವಲಿಂಗೇಗೌಡರ ಮಾರ್ಗದರ್ಶದಲ್ಲಿ 5 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇನೆ. ಸಂಪೂರ್ಣವಾಗಿ ಸಾವಯವ ವಿಧಾನದಲ್ಲಿ ತೆಂಗು, ಅಡಕೆ, ಬಾಳೆ, ಕಬ್ಬು, ಬೀನ್ಸ್, ಮೆಣಸಿ ಬೆಳೆದಿದ್ದೇನೆ. ನನ್ನಿಂದ ಯಾವುದೇ ಅಪೇಕ್ಷೆ ಇಲ್ಲದೆ ಶಿವಲಿಂಗೇಗೌಡರು ಮಾರ್ಗದರ್ಶನ ನೀಡುತ್ತಿದ್ದಾರೆ. ಸ್ವತಃ ಜಮೀನಿಗೆ ಬಂದು ಸಾವಯವ ಔಷಧ ತಯಾರು ಮಾಡುವುದನ್ನು ಹೇಳಿಕೊಡುತ್ತಿದ್ದಾರೆ. ನನಗೆ ಮಾತ್ರವಲ್ಲದೆ ಬೇರೆ ರೈತರಿಗೂ ಇದೇ ರೀತಿ ಸಲಹೆ ನೀಡುತ್ತಿದ್ದಾರೆ. ಇದರಿಂದ ತುಂಬಾ ಅನುಕೂಲವಾಗಿದೆ. ಮಲ್ಲೇಶ್‌ಗೌಡ, ಮುತ್ತಿಗೆ, ಚಾಮರಾಜನಗರ