

ಗಜೇಂದ್ರಗಡ:ಸಂಗೀತದ ಮೂಲಕ ಬದುಕು ಕಟ್ಟಿಕೊಳ್ಳಲು ಅನಾಥರಿಗೆ ಅವಕಾಶ ನೀಡುವುದರ ಜತೆಗೆ ಸ್ವಾವಲಂಬಿ ಜೀವನ ನಡೆಸಲು ಮಾರ್ಗದರ್ಶನ ಮಾಡಿದ ಪಂಡಿತ ಪುಟ್ಟರಾಜ ಗವಾಯಿಗಳು ನಾಡು ಕಂಡ ಶ್ರೇಷ್ಠ ಸಮಾಜ ಸುಧಾರಕರು ಎಂದು ಹೊಳೆಆಲೂರು ಎಪಿಎಂಸಿ ಸದಸ್ಯ ಮುದಿಯಪ್ಪ ಕರಡಿ ಹೇಳಿದರು.
ಸಮೀಪದ ಕುಂಟೋಜಿ ಗ್ರಾಮದಲ್ಲಿ ಪಂಡಿತ್ ಪುಟ್ಟರಾಜರ 10ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪುಟ್ಟರಾಜರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗವಾಯಿಗಳು ತಮ್ಮ ಜೀವಿತಾವಧಿಯಲ್ಲಿ ಗ್ರಾಮೀಣ ಪ್ರದೇಶದ ಅಂಧ ಬಡ ಮಕ್ಕಳನ್ನು ಭಿಕ್ಷೆ ರೂಪದಲ್ಲಿ ಪಡೆದು ಅವರಿಗೆ ಸಂಗೀತವನ್ನು ಧಾರೆ ಎರೆದರು. ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ಸಾವಿರಾರು ಅಂಧ ಬಡ ಮಕ್ಕಳು ಇಂದು ಖ್ಯಾತ ಸಂಗೀತಕಾರರಾಗಿ, ಕಲಾವಿದರಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.
ಮುಖಂಡ ಮಹಾಂತೇಶ ಪೂಜಾರ ಮಾತನಾಡಿ, ಅಂಧ ಗುರು, ಅಂಧ ಶಿಷ್ಯರು ಸಂಗೀತದ ಮೂಲಕ ಜಗತ್ತನ್ನೇ ಬೆಳಗುತ್ತಾರೆ ಎಂದು ಯಾರಿಗೂ ತಿಳಿದಿರಲಿಲ್ಲ ಎಂದರು.
ಗ್ರಾಮದ ಶರಣಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಪುಟ್ಟರಾಜರ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಮುತ್ತಯ್ಯ ಕಾರಡಗಿಮಠ, ಶರಣಪ್ಪ ಮಳಗಿ, ಬಸಪ್ಪ ಅಕ್ಕಿ, ಭೀಮಣ್ಣ ಡೊಳ್ಳಿನ, ಕಳಕಪ್ಪ ಜೂಲಗುಡ್ಡ, ಕಳಕಪ್ಪ ಮೇಟಿ, ಅಂದಯ್ಯ ಹಿರೇಮಠ, ಸಂಗಯ್ಯ ಕುಕನೂರಮಠ, ಶರಣಪ್ಪ ಜೂಲಗುಡ್ಡ, ಶರಣಪ್ಪ ಅಬ್ಬಿಗೇರಿ, ಶರಣಪ್ಪ ಡೊಳ್ಳಿನ, ಶರಣಪ್ಪ ಗೋನಾಳ, ಶರಣಯ್ಯ ಕಾರಡಗಿಮಠ, ಶರಣಪ್ಪ ಮಳಗಿ, ಗುರುನಾಥ ಹಡಪದ, ದೊಡ್ಡಪ್ಪ ಗೊಣ್ಣಾಗರ ಇತರರು ಇದ್ದರು.