

ಮೈಸೂರು: ಕನ್ನಡ ಸಿನಿಮಾ ಲೋಕದ ದೈತ್ಯ ಪ್ರತಿಭೆಯಾಗಿದ್ದ ಪುಟ್ಟಣ್ಣ ಕಣಗಾಲ್ ಬೆಳ್ಳಿ ತೆರೆಯ ದೊಡ್ಡಣ್ಣ ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.
ನಗರದ ಪಡುವಾರಹಳ್ಳಿ ಸ್ನೇಹ ಬಳಗದಿಂದ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಚಲನಚಿತ್ರ ನಿರ್ದಶಕ ಎಸ್. ಆರ್. ಪುಟ್ಟಣ್ಣ ಕಣಗಾಲರ ಜನ್ಮದಿನೋತ್ಸವದಲ್ಲಿ ಮಾತನಾಡಿ, ಪುಟ್ಟಣ್ಣ 24 ಕನ್ನಡ ಚಿತ್ರಗಳು, ತಮಿಳು ಮೂರು, ತೆಲುಗಿನಲ್ಲಿ ಮೂರು, ಮಲಯಾಳಂನಲ್ಲಿ ಆರು, ಹಿಂದಿಯಲ್ಲಿ ಒಂದು ಸೇರಿದಂತೆ ಇತರ ಭಾಷೆಗಳಲ್ಲಿ 13 ಚಿತ್ರ ನಿರ್ದೇಶಿಸಿ ಬಹುಭಾಷಾ ಚಿತ್ರ ನಿರ್ದೇಶಕರಾಗಿ ದೇಶದ ಗಮನ ಸೆಳೆದಿದ್ದರು ಎಂದರು.
‘ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್’ ಎಂಬುದು ಕೇವಲ ಒಂದು ಹೆಸರಲ್ಲ. ಸಿನಿಮಾ ಲೋಕದ ಸೀಮಾಪುರುಷ ಅವರು. ಕನ್ನಡ ಚಿತ್ರರಂಗದ ದಿಕ್ಕುದೆಸೆಗಳನ್ನು ಬದಲಾಯಿಸಿ ಪ್ರಯೋಗಾತ್ಮಕ ಸ್ಪರ್ಶ ನೀಡಿದ ಚಿತ್ರಬ್ರಹ್ಮ. ತಮ್ಮದೇ ಆದ ಚಿತ್ರ ಪರಂಪರೆ ಸೃಷ್ಟಿಸಿದರು. ಕಲಾವಿದ- ಕಲಾವಿದೆಯರೆಂದರೆ ಹೀಗಿರಬೇಕೆಂದು ತೋರಿಸಿದ ಕಲಾಶಿಲ್ಪಿ ಎಂದು ಬಣ್ಣಿಸಿದರು.
ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಪಡುವಾರಹಳ್ಳಿ ಎಂ.ರಾಮಕೃಷ್ಣ ಮಾತನಾಡಿದರು. ಸಿ.ರೇವಣ್ಣ, ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಎಸ್.ಕೃಷ್ಣಕುಮಾರ್, ಬಿ.ಕುಮಾರ್, ಕೇಬಲ್ ಕಿಟ್ಟಿ, ವಿಜಿಲಿನ್ಸ್ ಕಮಿಟಿಯ ಸದಸ್ಯ ಎಂ. ಶಿವಪ್ರಕಾಶ್ ಮುಂತಾದವರಿದ್ದರು.