ಪುಟ್ಟ ಗೂಡಿನಲ್ಲಿ 30 ಪುಟಾಣಿಗಳು : ಚನ್ನಪಟ್ಟಣದ ಅಂಗನವಾಡಿ ಕೇಂದ್ರದ ದುಸ್ಥಿತಿ, ಅಧಿಕಾರಿಗಳ ಜಾಣಕುರುಡು

2
Published on

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಗೂಡಿನಂತಿರುವ ಕೊಠಡಿ, ಗಾಳಿಯೂ ಇಲ್ಲ, ಬೆಳಕೂ ಇಲ್ಲ..., ಈ ಪುಟ್ಟ ಕೊಠಡಿಯಲ್ಲಿಯೇ ಮಕ್ಕಳ ಆಟ, ಪಾಠ, ನಿದ್ದೆ..., ನಾಲ್ಕಾರು ಜನ ವಾಸಿಸಲು ಸಾಧ್ಯವಾಗದ ಕಿರಿದಾದ ಸ್ಥಳದಲ್ಲಿ 30ಕ್ಕೂ ಹೆಚ್ಚು ಪುಟಾಣಿಗಳು ಕಾಲ ಕಳೆಯಬೇಕಾದ ಪರಿಸ್ಥಿತಿ... ಇದು ನಗರದ ಮಹದೇಶ್ವರ ನಗರದಲ್ಲಿರುವ ಅಂಗನವಾಡಿ ಕೇಂದ್ರದ ದುಸ್ಥಿತಿ.

ನಗರದ 31ನೇ ವಾರ್ಡ್‌ನ ಮಹದೇಶ್ವರ ನಗರದಲ್ಲಿ ಅಂಗನವಾಡಿ ಕೇಂದ್ರ ಹಲವು ವರ್ಷಗಳಿಂದ ಸಣ್ಣ ಅಂಗಡಿಯಲ್ಲಿ ನಡೆಯುತ್ತಿದೆ. ಶಿಕ್ಷಕಿ, ಸಹಾಯಕಿ ಮತ್ತು ನಾಲ್ಕು ಮಕ್ಕಳು ಕೂರಲು ಸ್ಥಳವಿರುವ ಈ ಜಾಗದಲ್ಲಿ 34 ಕಂದಮ್ಮಗಳು ಒಬ್ಬರ ಮೇಲೊಬ್ಬರು ಕುಳಿತುಕೊಳ್ಳುವ ಹಾಗೂ ಮಲುಗುವ ಸನ್ನಿವೇಶವಿದೆ. ಕಳೆದ ಆರು ವರ್ಷಗಳಿಂದಲೂ ಇದೇ ಸ್ಥಿತಿಯಲ್ಲಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.

ಎಲ್ಲವೂ ಒಂದೇ ಕೊಠಡಿಯಲ್ಲಿ: ಚಿಕ್ಕ ಕೊಠಡಿಯಲ್ಲಿ ಅಡುಗೆ ಕೋಣೆ, ಎರಡು ಸಿಲಿಂಡರ್, ತರಕಾರಿ ಮತ್ತು ದಿನಸಿ ಪದಾರ್ಥಗಳು, ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರ, ಔಷಧ, ಮೇಜು ಕುರ್ಚಿಗಳೂ ಇವೆ. ಅಂಗಡಿಯ ಷಟರ್ (ಬಾಗಿಲು) ಹೊರತುಪಡಿಸಿದರೆ ಗಾಳಿ ಬೆಳಕಿನ ವ್ಯವಸ್ಥೆಯೂ ಇಲ್ಲ. ಮಕ್ಕಳು ಹಾಗೂ ಕೇಂದ್ರದ ಸಿಬ್ಬಂದಿಗೆ ಶೌಚಗೃಹದ ವ್ಯವಸ್ಥೆಯೂ ಇಲ್ಲ. ಮಕ್ಕಳು ಒತ್ತೊತ್ತಾಗಿ ಕುಳಿತುಕೊಳ್ಳಬೇಕಿದೆ. ಒಬ್ಬರ ಮೇಲೊಬ್ಬರು ಮಲಗಿ, ಕೊಟ್ಟಿದ್ದನ್ನು ತಿಂದು, ಮಾನಸಿಕವಾಗಿ ಕುಗ್ಗಿ ಹೋಗುವುದು ಬಿಟ್ಟರೆ ಈ ಕೇಂದ್ರದಲ್ಲಿ ಬೇರೆ ಯಾವ ಸವಲತ್ತೂ ಇಲ್ಲ ಎಂಬುದು ಈ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿದರೆ ಮನದಟ್ಟಾಗುತ್ತದೆ.

ಕೇಂದ್ರದ ಸುತ್ತಲೂ ರಸ್ತೆ ಇರುವುದರಿಂದ ಪುಟಾಣಿಗಳಿಗೆ ಆಟವಾಡಲು ಜಾಗವಿಲ್ಲ. ಈ ಕೇಂದ್ರದಲ್ಲಿ ಆಟಕ್ಕಾಗಿ ಯಾವುದೇ ಆಟಿಕೆಗಳಿಲ್ಲ. ಕೆಲವೊಂದು ಇದ್ದರೂ ಅವುಗಳನ್ನು ಇಡಲು ಜಾಗ ಇಲ್ಲ. ಇದು ಹೆಸರಿಗೆ ಮಾತ್ರ ಅಂಗನವಾಡಿಯಂತಿದ್ದು, ಮಕ್ಕಳು ಮುಂದೆ ವಿದ್ಯಾಭ್ಯಾಸಕ್ಕೆ ಹೋಗಲು ಭಯಪಡಬೇಕಾದ ವಾತಾವರಣ ಇದೆ. ಕಿಷ್ಕಿಂಧೆಯಂತಹ ಜಾಗದಲ್ಲಿ ಈ ಕೇಂದ್ರ ನಡೆಯುತ್ತಿದ್ದರೂ, ಕೇಂದ್ರದ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿರುವ ಅಧಿಕಾರ ವರ್ಗದ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ರಾಜಕೀಯ ವಾಕ್ಸ್ಸಮರದಲ್ಲಿ ನಿರತವಾಗಿರುವ ಕ್ಷೇತ್ರದ ಜನಪ್ರತಿನಿಧಿಗಳು ಅಗತ್ಯವಾಗಿರುವ ಇಂತಹ ಸಮಸ್ಯೆಗಳನ್ನು ನಿವಾರಿಸುವ ಯತ್ನ ಮಾಡಲಿ ಎಂಬುದು ಕ್ಷೇತ್ರದ ಪ್ರಜ್ಞಾವಂತರ ಅನಿಸಿಕೆಯಾಗಿದೆ.

ಇಲಾಖೆ ನಾಲ್ಕು ಸಾವಿರ ಬಾಡಿಗೆ ನೀಡುತ್ತದೆ. ಆ ಪ್ರದೇಶದಲ್ಲಿ ಬಾಡಿಗೆ ಮೊತ್ತ ಹೆಚ್ಚಾಗಿರುವ ಕಾರಣ, ದೊಡ್ಡ ಜಾಗಕ್ಕೆ ಬಾಡಿಗೆ ನೀಡಲು ಹೆಚ್ಚಿನ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಅದು ಸಮಸ್ಯೆಗೆ ಕಾರಣವಾಗಿದೆ. ನೂತನ ಕಟ್ಟಡ ಕಟ್ಟಲು ನಿವೇಶನದ ಸಮಸ್ಯೆಯೂ ಇದೆ. ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟೂ ಬೇಗ ಸಮಸ್ಯೆ ನಿವಾರಿಸುವ ಪ್ರಯತ್ನ ವಾಡಲಾಗುವುದು. ಎಂ.ಕೆ. ಸಿದ್ದಲಿಂಗಯ್ಯ, ಸಿಡಿಪಿಒ ಈ ಕೇಂದ್ರಕ್ಕೆ ಭೇಟಿ ನೀಡಿದಾಗ ಇಲ್ಲಿನ ಅವ್ಯವಸ್ಥೆ ಅರ್ಥವಾಗುತ್ತದೆ. ಕಿರಿದಾದ ಜಾಗದಲ್ಲಿ ಮಕ್ಕಳು ಪರದಾಡುತ್ತಿರುವುದು ದುರಂತ ಎನಿಸುತ್ತದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳದೆ ಜನಪ್ರತಿನಿಧಿಗಳು ಒಮ್ಮೆ ಕೇಂದ್ರದ ದರ್ಶನ ಪಡೆಯಲಿ. ಶಿಲ್ಪಾ, ಬಡಾವಣೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net