ಪುಟಾಣಿ ಪೋರನ ಅಮೋಘ ಸಾಧನೆ

Putani
Published on

ಚಿತ್ರದುರ್ಗ: ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಅದು ಯಾರ ಸ್ವತ್ತು ಅಲ್ಲ. ಛಲ, ಆತ್ಮವಿಶ್ವಾಸವಿದ್ದರೆ, ಗುರಿ ತಲುಪುವುದು ಕಷ್ಟವೇನಲ್ಲ ಎಂಬುದಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಪುಟಾಣಿ ಪೋರ ಸೇರ್ಪಡೆಯಾಗಿದ್ದು, ಅಮೋಘ ಸಾಧನೆಗೈದಿದ್ದಾನೆ.

ಕೇವಲ 1 ನಿಮಿಷದೊಳಗೆ 35 ಬಾರಿ ಕಿಕ್ ಬಾಕ್ಸಿಂಗ್ ಮಾಡುವ ಸಾಮರ್ಥ್ಯ ಮೈಗೂಡಿಸಿಕೊಂಡಿದ್ದಾನೆ. ಇದರಿಂದಾಗಿ ಗಮನ ಸೆಳೆದು ರೆಕಾರ್ಡ್‌ಗೂ ಸೇರ್ಪಡೆಯಾಗಿ ಕೋಟೆನಗರಿಯ ಹಿರಿಮೆ ಹೆಚ್ಚಿಸಿದ್ದಾನೆ ಆರ್.ಎಸ್.ಪ್ರಣವ್ ಅಭ್ಯಂತ್.

ಈತನ ವಯಸ್ಸು ಕೇವಲ ಒಂದೂವರೆ ವರ್ಷ. ಟೆಕ್ವಾಂಡೊ ತರಬೇತಿ ಪಡೆಯುತ್ತಿದ್ದು, 11 ತಿಂಗಳಿದ್ದಾಗಿನಿಂದಲೂ ಇದರಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಕ್ರಿಯಾಶೀಲ ಬಾಲಕ ಆರಂಭದಲ್ಲಿ ಪ್ರತಿ ನಿಮಿಷಕ್ಕೆ 15ರಿಂದ 20 ಬಾರಿ, ಆರೇಳು ತಿಂಗಳ ಟ್ರೈನಿಂಗ್ ಬಳಿಕ 35 ಬಾರಿ ಕಿಕ್ ಬಾಕ್ಸಿಂಗ್ ಮಾಡುವಲ್ಲಿ ಸಾಮರ್ಥ್ಯವುಳ್ಳವನಾಗಿದ್ದಾನೆ.

ಟೆಕ್ವಾಂಡೊ ತರಬೇತುದಾರರಾದ ಎನ್.ಇ.ರುದ್ರೇಶ್, ವಿ.ಸವಿತಾ ದಂಪತಿಯ ಪುತ್ರನಾದ ಪ್ರಣವ್ ಅಭ್ಯಂತ್‌ಗೆ ತನ್ನ ಪಾಲಕರೆ ಗುರುಗಳು. ಇವರಿಬ್ಬರು ಇತರೆ ಮಕ್ಕಳಿಗೆ ಹೇಳಿಕೊಡುವುದನ್ನು ನೋಡುತ್ತಲೇ ಕಲಿಯುವ ಆಸಕ್ತಿ ಬೆಳೆಸಿಕೊಂಡಿದ್ದಾನೆ.

ಪಾಲಕರೊಂದಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ನಗರದ ವೀರವನಿತೆ ಒನಕೆ ಓಬವ್ವ ಹೊರಾಂಗಣ ಕ್ರೀಡಾಂಗಣಕ್ಕೆ ಹೋಗುವ ಹವ್ಯಾಸ ಹೊಂದಿದ್ದಾನೆ. ಈ ವೇಳೆ ರನ್ನಿಂಗ್, ವ್ಯಾಯಾಮ, ಕಿಕ್ ಬಾಕ್ಸಿಂಗ್ ತರಬೇತಿಯಲ್ಲಿ ನಿರತನಾಗುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net