

ಕುಣಿಗಲ್ : ತಾಲೂಕು ಅಭಿವೃದ್ಧಿ ವಿಚಾರದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುವುದು ಪಾಪದ ಕೆಲಸ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ವಿರೋಧಿಗಳ ವಿರುದ್ಧ ಹರಿಹಾಯ್ದರು. ಇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸೋಮವಾರ 1.50 ಕೋಟಿ ರೂಪಾಯಿ ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ, ಗ್ರಾಮ ಪಂಚಾಯಿತಿ ಕಟ್ಟಡ, ರಾಮ ಮಂದಿರ, ಕಾಮಗಾರಿ ಚಾಲನೆ ಹಾಗೂ ಅಂಗನವಾಡಿ, ಅಂಬೇಡ್ಕರ್ ಭವನ, ರೈತರ ಉಗ್ರಾಣ ಉದ್ಘಾಟಿಸಿ ಮಾತನಾಡಿದರು.
25 ವರ್ಷದಿಂದ ಎಡಿಯೂರು ಹೋಬಳಿಯ ಸಾಲು ಕೆರೆಗಳು ತುಂಬಿರಲಿಲ್ಲ, ಸಚಿವ ಜೆ.ಸಿ.ಮಾಧುಸ್ವಾಮಿ ಅವರಲ್ಲಿ ಒತ್ತಡ ತಂದು, ಹೇಮಾವತಿ ನೀರು ಹರಿಸಿ ಕೆರೆಗಳನ್ನು ತುಂಬಿಸಲಾಗಿದೆ. ಇದನ್ನು ನಾವು ಮಾಡಿದ್ದೇವೆ ಎಂದು ಕೆಲ ರಾಜಕಾರಣಿಗಳು ಪುಕ್ಕಟೆ ಪ್ರಚಾರದಲ್ಲಿ ತೊಡಗಿದ್ದಾರೆ. ಬೂಟಾಟಿಕೆ ರಾಜಕಾರಣಿಗಳನ್ನು ಜನರು ನೋಡಿದ್ದಾರೆ, ಅಭಿವೃದ್ಧಿ ಕೆಲಸ ಯಾರು ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ರಂಗನಾಥ್ ಕಿಡಿಕಾರಿದರು.
ಎರಡು ತಿಂಗಳ ಮುಂಚಿತವಾಗಿಯೇ ರಾಗಿ ಖರೀದಿ ನೋಂದಣಿ ನಿಲ್ಲಿಸಲಾಗಿದೆ, ರೈತರಿಂದ ಸಮರ್ಪಕವಾಗಿ ರಾಗಿ ಖರೀದಿ ಮಾಡುತ್ತಿಲ್ಲ, ಕರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಸರಿಯಾಗಿ ಪರಿಹಾರದ ಹಣ ನೀಡಿಲ್ಲ, ಹೀಗಾಗಿ ಸರ್ಕಾರ ಜೀವಂತವಾಗಿದಿಯೇ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ. ನಿಜವಾಗಲೂ ಸರ್ಕಾರ ಸತ್ತು ಹೋಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರ ಖಚಿತ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದ ಜನರು ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ವಿನಾಕಾರಣ ನಾಗರೀಕರ ಮೇಲೆ ಜಿಎಸ್‌ಟಿ ಅಂತಹ ಅನೇಕ ತೆರಿಗೆಗಳನ್ನು ವಿಧಿಸಿ ಜನರನ್ನು ಸಂಕಷ್ಟಕ್ಕೆ ದೂಡಲಾಗಿದೆ. ಜನ ವಿರೋಧಿ ನೀತಿಯಿಂದ ಸರ್ಕಾರ ಯಾವಾಗ ತೊಲಗುತ್ತದೋ ಎಂದು ಜನರು ಕಾಯುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ರಂಗನಾಥ್ ವಿಶ್ವಾಸ ವ್ಯಕ್ತಪಟಿಸಿದರು.
ಚುನಾವಣೆ ಸಮಯದಲ್ಲಿ ರಾಜಕೀಯ ಮಾಡೋಣ. ಆದರೆ ಜನರಿಗೆ ಮೂಲ ಸೌಲಭ್ಯ ಒದಗಿಸಲು ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದು ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ. ಡಾ.ಎಚ್.ಡಿ.ರಂಗನಾಥ್, ಶಾಸಕ