

ಮೈಸೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏನಾದರು ಉಚಿತವಾಗಿ ಕೊಡುತ್ತೇನೆ ಅಂದರೆ ಸಿದ್ದರಾಮನಹುಂಡಿಗೆ ಹೋಗಿ ದುಡಿದು ತಂದು ನಿಮಗೆ ಕೊಡುವುದಿಲ್ಲ, ಅದೇ ರೀತಿ ಹಾಸನ ಮೂಲದವರು ಚಿನ್ನದ ಆಲೂಗಡ್ಡೆ ಬೆಳೆದು ಉಚಿತ ಕೊಡುಗೆಗಳನ್ನು ನೀಡುವುದಿಲ್ಲ. ಹಾಗಾಗಿ ರಾಜಕೀಯ ಪಕ್ಷಗಳ ಪುಕ್ಕಟೆ ಭರವಸೆಗಳಿಗೆ ರಾಜ್ಯದ ಜನರು ಕಿವಿಗೊಡಬಾರದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷ ಉಚಿತವಾಗಿ ಏನಾದರು ಕೊಡುತ್ತೇವೆ ಎಂದು ಹೇಳಿದರೆ ನಂಬಬೇಡಿ. ನಿಮ್ಮ ತೆರಿಗೆ ಹಣವನ್ನು ನಿಮಗೇ ಹಂಚುತ್ತೇವೆ ಎಂದು ರಾಜ್ಯವನ್ನು ದಿವಾಳಿ ಮಾಡುತ್ತಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಚುನಾವಣೆ ಹಿನ್ನೆಲೆಯಲ್ಲಿ ಪುಕ್ಕಟೆ ಭರವಸೆಗಳನ್ನು ನೀಡುತ್ತಿದೆ. ಇದೊಂತರ ಕೇಜ್ರಿವಾಲ್ ಮಾಡೆಲ್ ಆಗಿದೆ. ಪುಕ್ಕಟೆ ನೀರು, ಕರೆಂಟ್, ಕುಕ್ಕರ್, ಟಿವಿ, ಭೂಮಿ ಕೊಡುತ್ತೇವೆ ಎಂದು ಡಿಎಂಕೆ ಹಾಗೂ ಕೇಜ್ರಿವಾಲ್ ಕೊಡುಗೆಗಳನ್ನು ಬೇರೆ ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಪ್ರತಿ ಮಹಿಳೆಗೆ ಒಂದರಿಂದ ಎರಡು ಸಾವಿರ ಕೊಡುವುದಾಗಿ ಆಮ್ ಆದ್ಮಿ ಪಾರ್ಟಿ ಘೋಷಿಸಿತ್ತು. ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದರೂ ಈ ಭರವಸೆ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿದರು.
ರಾಜಕಾರಣಿಗಳು ಅವರ ಅಪ್ಪನ ಮನೆಯ ಆಸ್ತಿ ಮಾರಿ ತಂದು ಕೊಡುತ್ತಾರಾ? ಜನರು ನೀಡುವ ಅಧಿಕಾರ ದುರುಪಯೋಗ ಪಡಿಸಿ ಕೊಂಡು ತಮ್ಮ ಮಕ್ಕಳು, ಮರಿ ಮಕ್ಕಳಿಗೆ ಆಸ್ತಿ ಮಾಡುತ್ತಾರೆ. ಪುಕ್ಕಟೆ ಕೊಡುಗೆ ನೀಡುವ ಘೋಷಣೆ ಮಾಡುವವರು ಜನರಿಗೆ ಏನೂ ಕೊಡುವುದಿಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಯಾವ ರಾಜಕಾರಣಿ ತನ್ನ ಮನೆಯಿಂದ ತಂದು ಕೊಟ್ಟ ಉದಾಹರಣೆ ಇಲ್ಲ. ತನ್ನ ವೈಯಕ್ತಿಕ ಬದುಕು ಹೆಚ್ಚಿಸಿಕೊಂಡಿದ್ದಾನೆಯೇ ಹೊರತು ಸಮಾಜಕ್ಕಾಗಿ ದುಡಿದ ಉದಾಹರಣೆಯೇ ಇಲ್ಲ. ಹಾಗಾಗಿ ಬಿಜೆಪಿಯವರು ಸಹ ಅವರ ಮನೆಯಿಂದ ತಂದುಕೊಡುವುದಿಲ್ಲ. ಇಂತಹ ಚುನಾವಣೆ ಗಿಮಿಕ್‌ಗೆ ಮರುಳಾಗಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಬಿಜೆಪಿ ಅಭಿವೃದ್ಧಿ ವಿಚಾರದಲ್ಲಿ ಮುಂದಿನ ಚುನಾವಣೆ ಎದುರಿಸುತ್ತದೆ. 75 ವರ್ಷದಲ್ಲಿ ಕಾಂಗ್ರೆಸ್ ಎಷ್ಟು ಮನೆಗಳಿಗೆ ಕುಡಿಯುವ ನೀರು ಕೊಟ್ಟಿದೆ, ನಾವು 3.5 ವರ್ಷದಲ್ಲಿ ಎಷ್ಟು ಮನೆಗೆ ನೀರು ಕೊಟ್ಟಿದ್ದೇವೆ ಎಂಬ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ಸಿಡಿ ಮುಂದಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಕರ್ನಾಟಕದ ರಾಜಕಾರಣ ಸಿಡಿ, ಆಡಿಯೋ ಹಾಗೂ ವೈಯಕ್ತಿಕ ವಿಚಾರ ಬಿಟ್ಟು ಮುಂದೆ ಸಾಗಿದೆ. ಜನರ ಮುಂದೆ ತೆರೆದಿಡಲು ಅಭಿವೃದ್ಧಿ ವಿಚಾರ ಇಲ್ಲದವರು ಇಂತಹ ವಿಚಾರದಲ್ಲೇ ಇರುತ್ತಾರೆ. ಎಲ್ಲರ ಮೊಬೈಲ್ ತೆಗೆದರೆ ಏನಾದರು ಒಂದು ಸಿಗುತ್ತದೆ, ಓಪನ್ ಮಾಡಿ ಅಂದರೆ ಎಷ್ಟು ಜನರಿಗೆ ಓಪನ್ ಮಾಡುವ ಧೈರ್ಯ ಇದೆ ಹೇಳಿ? ಇಂತಹ ವಿಚಾರಗಳಿಗೆ ಜನರು ಸೊಪ್ಪು ಹಾಕುವುದಿಲ್ಲ ಎಂಬುದು ಎಲ್ಲ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.
ಅಧಿಕಾರಕ್ಕೆ ಬಂದರೆ ವಿಧಾನಸೌಧ ಶುದ್ಧಿ ಮಾಡುತ್ತೇವೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ರಾಜಕಾರಣದಲ್ಲಿ ಬಹಳಷ್ಟು ಜನ ಮಾತನಾಡುತ್ತಾರೆ, ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ನಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಷ್ಟ್ರ ರಾಜಕಾರಣವನ್ನೇ ಶುದ್ಧೀಕರಣ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.