

ಗುಂಡ್ಲುಪೇಟೆ: ಬಂಡೀಪುರದ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಪುಂಡಾನೆ ಸೆರೆಗೆ ಕಾರ್ಯಾಚರಣೆ ಮೂರನೇ ದಿನವೂ ವಿಫಲವಾಗಿದೆ.
ತಮಿಳುನಾಡಿನ ಅರಣ್ಯದಿಂದ ಬಂಡೀಪುರಕ್ಕೆ ಆಗಮಿಸಿದ ಪುಂಡಾನೆಗೆ ರೇಡಿಯೋ ಕಾಲರ್ ಅಳವಡಿಸಿದ್ದರೂ ಅದನ್ನು ನಿಖರವಾಗಿ ಪತ್ತೆಹಚ್ಚಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ. ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ನೇತೃತ್ವದಲ್ಲಿ ಭೀಮ, ಗಜೇಂದ್ರ ಹಾಗೂ ಗಣೇಶ ಆನೆಗಳನ್ನು ಬಳಸಿಕೊಂಡು ಒ.7,8 ರಂದು ಸೋಮವಾರ ಸತತ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯ ಆನೆಯು ಗೋಪಾಲಸ್ವಾಮಿ ಬೆಟ್ಟ ಹಾಗೂ ಮದ್ದೂರು ವಲಯಗಳ ನಡುವೆ ಓಡಾಡುತ್ತಿದೆ ಎನ್ನಲಾಗುತ್ತಿದೆ. ಕಾರ್ಯಾಚರಣೆಗೆ ಕುಂದಕೆರೆ ವಲಯ ಸೇರಿದಂತೆ ಮೂರು ವಲಯಗಳ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಗಿದ್ದಾರೆ. ಆದರೂ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆಯ ಕೊರತೆಯಿಂದ ಕಾರ್ಯಾಚರಣೆ ಫಲಕೊಡುತ್ತಿಲ್ಲ.
ಕಳೆದ ವಾರ ಬೆಟ್ಟದ ಮಾದಹಳ್ಳಿ ಗ್ರಾಮದಲ್ಲಿ ರೈತರನ್ನು ಗಾಯಗೊಳಿಸಿದ್ದ ಆನೆಯನ್ನು ಕೆಲವೇ ಗಂಟೆಗಳ ಆಪರೇಷನ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಆದರೆ ರೇಡಿಯೋ ಕಾಲರ್ ಅಳವಡಿಸಿದ ಆನೆಯನ್ನು ಸೆರೆಹಿಡಿಯುವುದಿರಲಿ ಮೂರು ದಿನಗಳಾದರೂ ಆನೆ ಇರುವ ಸ್ಥಳವನ್ನೇ ಪತ್ತೆಹಚ್ಚಿಲ್ಲ. ಇದರಿಂದ ಸಾಕಾನೆಗಳನ್ನು ಅತ್ತಿಂದಿತ್ತ ಓಡಾಡಿಸುವುದರಲ್ಲಿಯೇ ದಿನ ಕಳೆಯುತ್ತಿದೆ. ಪಶುವೈದ್ಯರು ಹಾಗೂ ಮಾವುತರಿಗೆ ಸರಿಯಾದ ವಸತಿ, ನೀರು ಹಾಗೂ ಆಹಾರ ನೀಡುತ್ತಿಲ್ಲ. ಇದರಿಂದ ಮಾವುತರು ಹಾಗೂ ಪಶುವೈದ್ಯರು ಬೇಸತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ತಿಳಿಸಿದ್ದಾರೆ.