ಗುಂಡ್ಲುಪೇಟೆ: ಪಟ್ಟಣದ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಚಾಲನೆ ಮಾಡುವ ಪುಂಡರಿಗೆ ಪೊಲೀಸರು ಪಾಠ ಕಲಿಸಲು ಮುಂದಾಗಿದ್ದಾರೆ.
ಪಟ್ಟಣ ವ್ಯಾಪ್ತಿಯ ಶಾಲಾ-ಕಾಲೇಜುಗಳ ಸುತ್ತಮುತ್ತಲೂ ಪುಂಡರ ಹಾವಳಿಯನ್ನು ನಿಯಂತ್ರಿಸುವ ಸಲುವಾಗಿ ಪಟ್ಟಣ ಠಾಣೆಯ ಪೊಲೀಸರು ಆಪರೇಷನ್ ಸೇಫ್ ಡ್ರೈವ್ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದಕ್ಕಾಗಿ ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್ ನೇತೃತ್ವದಲ್ಲಿ ನಾಲ್ಕು ಸಿಬ್ಬಂದಿ ನಿಯೋಜಿಸಲಾಗಿದೆ. ಸಂಚಾರ ನಿಯಮಗಳ ಪಾಲನೆ ಮಾಡದೆ ಬೈಕುಗಳಲ್ಲಿ ತ್ರಿಬ್ಬಲ್ ರೈಡಿಂಗ್, ಮೊಬೈಲ್ ಬಳಕೆ, ಅತಿ ವೇಗದ ಚಾಲನೆ, ಪರವಾನಗಿ ಇಲ್ಲದೆ ಚಾಲನೆ ಮಾಡುವವರನ್ನು ವಶಕ್ಕೆ ಪಡೆದು ದಂಡ ವಿಧಿಸುವ ಜತೆಗೆ ಕಾನೂನಿನ ಪಾಠ ಮಾಡುತ್ತಿದ್ದಾರೆ. ವಶಕ್ಕೆ ಬೈಕ್ ಸವಾರರಿಗೆ ಸಂಚಾರ ನಿಯಮಗಳ ಪಾಲನೆ ಅಗತ್ಯ ಹಾಗೂ ಅಪಘಾತ ಸಂಭವಿಸಿದರೆ ಉಂಟಾಗುವ ಕಾನೂನಿನ ತೊಡಕುಗಳ ಬಗ್ಗೆ ತಿಳಿವಳಿಕೆ ನೀಡಿ ಕಳುಹಿಸಲಾಗುತ್ತಿದೆ.
ಸೋಮವಾರ ಒಂದೇ ದಿನ 16 ಬೈಕ್‌ಗಳನ್ನು ವಶಕ್ಕೆ ಪಡೆದು ಒಟ್ಟು 10 ಸಾವಿರ ರೂ. ದಂಡ ವಿಧಿಸಲಾಗಿದ್ದು ಮೂರು ಕಾರ್ಯಾಚರಣೆಗಳಲ್ಲಿ ಒಟ್ಟು 40 ಬೈಕ್ ಸವಾರರಿಂದ 33 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ. ಆದ್ದರಿಂದ ಬೈಕ್ ಸವಾರರು ಸಂಚಾರ ನಿಯಮ ಪಾಲಿಸಿ ಕಾನೂನು ಗೌರವಿಸುವ ಅಭ್ಯಾಸ ಪಾಲಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.