

ಚಾಮರಾಜನಗರ : ಓವರ್‌ಟೇಕ್ ಮಾಡಲು ಅವಕಾಶ ದೊರಕದ ಹಿನ್ನೆಲೆಯಲ್ಲಿ ಮುಂಭಾಗದ ಕಾರಿನಲ್ಲಿದ್ದ ಪ್ರಯಾಣಿಕರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ ಹಲ್ಲೆ ನಡೆಸಿದ ಯುವಕರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಟ್ವಿಟರ್‌ನಲ್ಲಿ ಘಟನೆ ಸಂಬಂಧಿತ ವಿಡಿಯೋ ವೀಕ್ಷಿಸಿದ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್‌ಕುಮಾರ್ ಅವರು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಸೂಚಿಸಿ ಸಂತ್ರಸ್ತರನ್ನು ಸಂಪರ್ಕಿಸುವಂತೆ ಮೊಬೈಲ್ ಸಂಖ್ಯೆ ಸಮೇತ ಎರಡು ದಿನದ ಹಿಂದಷ್ಟೆ ಮರು ಟ್ವೀಟ್ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಂತ್ರಸ್ತ ಭಾನುವಾರ ಪಟ್ಟಣದ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದು, ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ. ವಾಹನದ ನೋಂದಣಿ ಆಧಾರದ ಮೇಲೆ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಘಟನೆಯ ವಿವರ: ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅರುಣ್ ಎಂಬುವರು ಜೂನ್ 17 ರಂದು ಕೇರಳ ನೋಂದಣಿ ಇರುವ ಡಸ್ಟರ್ ಕಾರಿನಲ್ಲಿ ತಮ್ಮ ಕುಟುಂಬ ಸಮೇತ ಬಂಡೀಪುರ ಮಾರ್ಗವಾಗಿ ಕೇರಳದ ಮಲಪ್ಪುರಂಗೆ ತೆರಳುತ್ತಿದ್ದರು. ಈ ವೇಳೆ ಬಂಡಿಪುರದ ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್ ಬಳಿ ಹೆಚ್ಚಿನ ಕಾರುಗಳು ಇದ್ದುದರಿಂದ ಹಿಂದಿನಿಂದ ಬಂದ ಕಾರಿನಲ್ಲಿದ್ದ ಯುವಕರ ಗುಂಪೊಂದು, ಅರುಣ್ ಅವರ ಕಾರನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿತು. ಆದರೆ ಹೆಚ್ಚಿನ ವಾಹನ ಇದ್ದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಆ ಯುವಕರು ಹಿಂಬಾಲಿಸಿಕೊಂಡೇ ಬಂದು ಕಾರನ್ನು ಅಡ್ಡಗಟ್ಟಿದ್ದಾರೆ.
ಕಾರಿನಿಂದ ಕೆಳಗಿಳಿದ ಮೂವರು ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅರುಣ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯ ದೃಶ್ಯಾವಳಿ ಕಾರಿನಲ್ಲಿದ್ದ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದನ್ನು ಮನಗಂಡು ಅದನ್ನು ಕಿತ್ತುಹಾಕಲು ಪ್ರಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ರೆಕಾರ್ಡ್ ಆಗಿದ್ದ ದೃಶ್ಯಾವಳಿಯನ್ನು ಅರುಣ್ ಬೇಸರ ವ್ಯಕ್ತಪಡಿಸಿ ತಮ್ಮ ಟ್ವಿಟರ್ ಖಾತೆಗೆ ಅಪ್‌ಲೋಡ್ ಮಾಡಿದ್ದರು. ಇದನ್ನು ವೀಕ್ಷಿಸಿದ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್‌ಕುಮಾರ್ ಕ್ರಮಕ್ಕೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಅರುಣ್ ಗುಂಡ್ಲುಪೇಟೆಗೆ ಆಗಮಿಸಿ ದೂರು ನೀಡಿದ್ದಾರೆ.