ಪೀಳಿಗೆಯಿಂದ ಪೀಳಿಗೆಗೆ ಜನಪದ ಕಲೆ ಹರಿಯಬೇಕು :ಎಂ.ಡಿ. ಸುದರ್ಶನ್

ಪೀಳಿಗೆಯಿಂದ ಪೀಳಿಗೆಗೆ ಜನಪದ ಕಲೆ ಹರಿಯಬೇಕು :ಎಂ.ಡಿ. ಸುದರ್ಶನ್
Published on

ಹಾಸನ : ಜನಪದ ಕಲೆಗಳ ಪ್ರದರ್ಶನದಿಂದ ನಮ್ಮ ನಾಡಿನ ಮೂಲ ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ತಿಳಿಸುವ ಕೆಲಸ ಆಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಯೋಜನೆಯಡಿ ಹಮ್ಮಿಕೊಂಡಿದ್ದ ‘ಜನಪರ ಉತ್ಸವ’ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೀಳಿಗೆಯಿಂದ ಪೀಳಿಗೆಗೆ ಜನಪದ ಕಲೆ ಹರಿಯಬೇಕಾದರೆ ಜನಪದ ಕಲಾವಿದರನ್ನು ಪ್ರೋತ್ಸಾಹಿಸುವ ಮತ್ತು ಅವರ ಆರ್ಥಿಕ ಸ್ಥಿತಿ ಉತ್ತಮ ಪಡಿಸುವ ಹೊಣೆಯನ್ನು ಸಮಾಜ ಹೊರಬೇಕು ಎಂದು ಹೇಳಿದರು.


ದುಡಿಯುವ ಜನರ ಸುಖ, ದುಃಖ, ನೋವು, ನಲಿವು, ಬದುಕಿನ ಸಂಕೀರ್ಣತೆ ಮತ್ತಿತರ ಅಂಶಗಳನ್ನು ಜನಪದ ಕಲೆಗಳು ಒಳಗೊಂಡಿವೆ. ಹಾಗಾಗಿ ಇಂತಹ ಕಲೆಗಳ ಪ್ರದರ್ಶನ, ವೀಕ್ಷಣೆ, ಕಲಿಯುವಿಕೆ ನಮ್ಮನ್ನು ನಿಜ ಮನುಷ್ಯರನ್ನಾಗಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ನಶಿಸಿಹೋಗುತ್ತಿರುವ ಜನಪದ ಕಲೆಗಳಿಗೆ ಹೊಸರೂಪ ಕೊಟ್ಟು ಉಳಿಸಿಕೊಳ್ಳುವ ಹೊಣೆ ಮತ್ತು ಶಕ್ತಿ ಯುವಜನರಲ್ಲಿದೆ. ಆ ನಿಟ್ಟಿನಲ್ಲಿ ಯುವ ಕಲಾವಿದರು ಚಿಂತನೆ ನಡೆಸಿ ಕಾರ್ಯೋನ್ಮುಖರಾಗಬೇಕು. ವಿವಿಧ ಮಾಧ್ಯಮಗಳಲ್ಲಿ ಜನಪದ ಕಲೆಗಳನ್ನು ದುಡಿಸಿಕೊಳ್ಳುವುದರಿಂದ ಅದರ ಮಾರುಕಟ್ಟೆಯನ್ನೂ ವಿಸ್ತರಿಸಿ ಕಲಾವಿದರ ಆರ್ಥಿಕ ಸ್ವಾವಲಂಬನೆಗೂ ನೆರವಾಗಬಹುದು ಎಂದು ಸಲಹೆ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ಈಗಿನ ಕಾಲದಲ್ಲಿ ಮಕ್ಕಳು ಮೊಬೈಲ್‌ಗಳಲ್ಲಿ ಮುಳುಗಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸದಂತಾಗಿದೆ. ಪೋಷಕರು ಮಕ್ಕಳನ್ನು ಆದಷ್ಟು ಸಾಮಾಜಿಕ ಜಾಲತಾಣಗಳಿಂದ ದೂರವಿರಿಸಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.


ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಕರಗ ನೃತ್ಯ, ಗಾರುಡಿ ಗೊಂಬೆ, ಸೋಮನ ಕುಣಿತ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ, ಪಟ ಕುಣಿತ, ನಗಾರಿ, ಚಿಟ್ಟಿ ಮೇಳ, ಲಂಬಾಣಿ ನೃತ್ಯ, ತೊಗಲು ಗೊಂಬೆ ಆಟ ಹೀಗೆ ನಾನಾ ಜನಪದ ಕಲೆಗಳ ಪ್ರದರ್ಶನ ನಡೆಯಿತು. ಭಕ್ತಿಗೀತೆ, ಸುಗಮ ಸಂಗೀತ, ಗೀಗೀ ಪದ, ಜಾನಪದ ಗೀತೆ, ತತ್ವ ಪದ, ಭಜನೆ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷರನ್ನು ಹಿಡಿದಿಟ್ಟವು.


ಹಿರಿಯ ಜನಪದ ಕಲಾವಿದರಾದ ಸಂಪತ್ ಕುಮಾರ್, ಪುಷ್ಪಲತಾ, ಕುಮಾರಯ್ಯ, ಭಗವಾನ್ ಇತರರು ಉಪಸ್ಥಿತರಿದ್ದರು. ಯದೀಶ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಮೊದಲು ನಗರದ ರೈಲು ನಿಲ್ದಾಣದ ಮುಂಭಾಗದಿಂದ ಜನಪದ ಕಲಾ ತಂಡಗಳ ಉತ್ಸವಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನ, ಜಿಪಂ ಸಿಇಒ ಕಾಂತರಾಜು ಮತ್ತು ನಗರಸಭೆ ಅಧ್ಯಕ್ಷ ಮೋಹನ್ ಚಾಲನೆ ನೀಡಿದರು. ಕಲಾ ತಂಡಗಳ ಉತ್ಸವ ನಗರದ ಬಿ.ಎಂ. ರಸ್ತೆಯಲ್ಲಿ ಸಾಗಿ ಎನ್.ಆರ್. ವೃತ್ತದ ಮೂಲಕ ಹಾಸನಾಂಬ ಕಲಾಕ್ಷೇತ್ರಕ್ಕೆ ಆಗಮಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net