ಪೀಠ ತ್ಯಾಗ ಮಾಡಿದ ಮೇಲೆ ಬಂದ ಪಾರ್ಸೆಲ್

05Rajesh12
Published on

ಗುಂಡ್ಲುಪೇಟೆ: ತಾಲೂಕಿನ ಚೌಡಹಳ್ಳಿ ಗ್ರಾಮದ ಮಠದ ಪೀಠ ತ್ಯಾಗ ವಿವಾದದಲ್ಲಿ ಸೋಮವಾರ ಮತ್ತೊಂದು ಬೆಳವಣಿಗೆ ನಡೆದಿದೆ. ಯಾದಗಿರಿಯ ನಿಸಾರ್ ಅಹಮದ್ ಜಂಗಮ ದೀಕ್ಷೆ ಪಡೆದು ನಿಜಲಿಂಗ ಸ್ವಾಮೀಜಿಯಾಗಿದ್ದರು. ಬಳಿಕ ಚೌಡಹಳ್ಳಿ ಮಠಕ್ಕೆ ಬಂದು ಪೀಠಾಧಿಪತಿಯಾಗಿದ್ದರು. ಈ ವಿಷಯ ಗ್ರಾಮಸ್ಥರಿಗೆ ತಿಳಿದು ವಿರೋಧ ವ್ಯಕ್ತವಾದ ಬಳಿಕ ನಿಜಲಿಂಗ ಸ್ವಾಮೀಜಿ ಪೀಠ ತ್ಯಾಗ ಮಾಡಿದ್ದರು. ಈ ವಿವಾದ ಮಾಸುವ ಮುನ್ನವೇ ಸೋಮವಾರ ಮಠದ ವಿಳಾಸಕ್ಕೆ ಮುಸ್ಲಿಂ ಟೋಪಿ ಪಾರ್ಸೆಲ್ ಬಂದಿದೆ. ಅಲ್ಲದೇ, ಮದ್ಯದ ಬಾಟಲಿ ಹಿಡಿದಿರುವ ಪೋಟೋ ಮತ್ತು ಯುವಕನೊಬ್ಬನ ಜತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ನಡುವೆ ನಿಜಲಿಂಗ ಸ್ವಾಮೀಜಿ ಪರ ಮತ್ತು ವಿರುದ್ಧ ಜಾಲತಾಣಗಳಲ್ಲಿ ಚರ್ಚೆಯೂ ನಡೆಯುತ್ತಿದೆ.

ಮಠಕ್ಕೆ ಬಂತು ಪಾರ್ಸೆಲ್:

ಗ್ರಾಮದ ಮಠದ ವಿಳಾಸಕ್ಕೆ ಸೋಮವಾರ ಮಧ್ಯಾಹ್ನ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ್ದ ಪಾರ್ಸೆಲ್ ಬಂದಿತ್ತು. ಮಠ ಬಾಗಿಲು ಹಾಕಿದ್ದ ಹಿನ್ನೆಲೆಯಲ್ಲಿ ಕೊರಿಯರ್ ಬಾಯ್ ಅಂಗಡಿ ಬಳಿಗೆ ಬಂದು ಕೇಳಿದ. ಸ್ಥಳೀಯರು ಯಾಕೆಂದು ಪ್ರಶ್ನೆ ಮಾಡಿದಾಗ ನಿಜಲಿಂಗ ಸ್ವಾಮೀಜಿ ಟೋಪಿ ಬುಕಿಂಗ್ ಮಾಡಿದ್ದಾರೆ ಎಂದು ಗೊತ್ತಾಗಿದೆ. ಪಾರ್ಸೆಲ್ ಪಡೆದು ನೋಡಿದಾಗ ಅದು ಮುಸ್ಲಿಂ ಟೋಪಿ ಎಂದು ತಿಳಿದುಬಂದಿದೆ. ಪರಿಶೀಲನೆ ಮಾಡಿದಾಗ ನಿಜಲಿಂಗಸ್ವಾಮೀಜಿ ಹೆಸರು, ಮೊಬೈಲ್‌ನಲ್ಲೇ ಪಾರ್ಸೆಲ್ ಬುಕಿಂಗ್ ಆಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜಪ್ಪ ತಿಳಿಸಿದ್ದಾರೆ. ಮಠಕ್ಕೆ ಭೇಟಿ ನೀಡುತ್ತಿದ್ದ ಯುವಕನೊಬ್ಬನಿಗೆ ನಿಜಲಿಂಗಸ್ವಾಮೀಜಿ ಉಪಯೋಗಿಸಲು ತನ್ನ ಮೊಬೈಲ್ ಕೊಟ್ಟಿದ್ದರು. ಅದರಲ್ಲಿ ಮದ್ಯದ ಬಾಟಲು ಹಿಡಿದಿರುವ ಪೋಟೋ ಮತ್ತು ಯುವಕನೊಬ್ಬನೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋ ಸಿಕ್ಕಿತು. ೆನ್ ಪೇ, ಗೂಗಲ್ ಪೇಯಲ್ಲಿ ನಿಸಾರ್ ಅಹವದ್ ಎಂದು ಹೆಸರು ತೋರಿಸುತ್ತಿರುವುದರ ಬಗ್ಗೆ ಅನುಮಾನದಲ್ಲಿದ್ದ ಯುವಕನಿಗೆ ಮೊಬೈಲ್‌ನಲ್ಲಿ ಸಿಕ್ಕ ಪೋಟೋ ಮತ್ತು ವಿಡಿಯೋಗಳನ್ನು ಗ್ರಾಮಸ್ಥರಿಗೆ ತೋರಿಸಿ ಪೀಠಾಧಿಪತಿಯ ಪೂರ್ವಪರ ತಿಳಿಯಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ದೀಕ್ಷಾ ಪೂರ್ವದ ಪೋಟೋಗಳು:

ಪೂರ್ವಾಶ್ರಮದಲ್ಲಿ ಯಾರು ತಾನೇ ತಪ್ಪು ಮಾಡುವುದಿಲ್ಲ. ದೀಕ್ಷಾ ಪೂರ್ವದಲ್ಲಿ ನಾನು ಬಿಯರ್ ಹಿಡಿದ್ದ, ವಸವಿಲ್ಲದ ಪೋಟೋಗಳು ಅವರ ಬಳಿ ಇವೆ. ಟೋಪಿಯ ಮೇಲೆ ಪೇಟೆ ಕಟ್ಟಿದರೆ ಸುಲಭವಾಗಿ ಧರಿಸಬಹುದು ಎಂದು ಟೋಪಿ ಆರ್ಡರ್ ಮಾಡಿದ್ದೆ ಎಂದು ನಿಜಲಿಂಗಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net