ಪಿಸ್ತೂಲ್ ಮಾರುತ್ತಿದ್ದ ಇಬ್ಬರ ಬಂಧನ

IMG-20250430-WA0011
Published on

ಕೊಳ್ಳೇಗಾಲ: ಜಾರ್ಖಂಡ್‌ನಿಂದ ತಂದ ಪಿಸ್ತೂಲನ್ನು ಕೊಳ್ಳೇಗಾಲದಲ್ಲಿ ಮಾರಾಟ ಮಾಡಲು ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಪಿಸ್ತೂಲ್ ಮತ್ತು 10 ಸಜೀವ ಗುಂಡುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಮೈಸೂರಿನ ಕಲ್ಯಾಣ ಗಿರಿ ಕೆಎಸ್‌ಬಿ ಕಾಲನಿ ನಿವಾಸಿ ತೌಫಿಕ್ ಅಹಮ್ಮದ್ (40), ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಮಹಮ್ಮದ್ ಅರ್ಷದ್‌ವುಲ್ಲಾ (36) ಬಂಧಿತರು. ಇವರು ಮಂಗಳವಾರ ರಾತ್ರಿ ಉತ್ತಂಬಳ್ಳಿ ಸರ್ಕಲ್ ಬಳಿ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡಲು ಮುಂದಾಗಿರುವ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ಶ್ರೀಕಾಂತ್ ಹಾಗೂ ಉಪ ವಿಭಾಗ ಅಪರಾಧ ಪತ್ತೆ ದಳ ಸಿಬ್ಬಂದಿ ಕಾರ್ಯಾಚರಣೆಗಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ತೌಫಿಕ್ ಅಹಮ್ಮದ್ ಬಳಿ 1 ಪಿಸ್ತೂಲ್ ಹಾಗೂ 10 ಸಜೀವ ಗುಂಡುಗಳು ಪತ್ತೆಯಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಿಸ್ತೂಲ್ ಮತ್ತು 10 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಡತನ ನಿವಾರಣೆಗಾಗಿ ಪಿಸ್ತೂಲ್ ಮಾರಾಟ:ಆರೋಪಿ ತೌಫಿಕ್ ಅಹಮ್ಮದ್ ತನ್ನ ಬಡತನ ನಿವಾರಣೆಗಾಗಿ ಪಿಸ್ತೂಲ್ ಮಾರಾಟಕ್ಕಿಳಿದಿದ್ದಾನೆ. ಪೊಲೀಸರ ವಿಚಾರಣೆಯಲ್ಲಿ ಆರೋಪಿ ಪಿಸ್ತೂಲ್‌ಗೆ ಲೈಸೆನ್ಸ್ ಇಲ್ಲವೆಂದು ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ ಬಣ್ಣದ ಕೆಲಸ ಮಾಡಲು ಮೈಸೂರಿಗೆ ಬಂದಿದ್ದ ಜಾರ್ಖಂಡ್ ಮೂಲದ ಜಾಹೀದ್ ಅನ್ಸಾರಿ ಪರಿಚಯವಾಗಿದ್ದ. ಈತನ ಬಳಿ ಬಡತನದ ಬಗ್ಗೆ ಹೇಳಿದಾಗ, ಜಾರ್ಖಂಡ್‌ನಲ್ಲಿ ಕಡಿಮೆ ಬೆಲೆಗೆ ಪಿಸ್ತೂಲ್‌ಗಳು ಸಿಗುತ್ತವೆ. ಅದನ್ನು ನಾನು ನಿನಗೆ ತಂದು ಕೊಡುತ್ತೇನೆ. ನೀನು ಇಲ್ಲಿ 1 ಲಕ್ಷ ರೂ.ಗೆ ಮಾರಾಟ ಮಾಡಿ ನನಗೆ 60 ಸಾವಿರ ರೂ. ಕೊಡು, ನೀನು 40 ಸಾವಿರ ರೂ. ಇಟ್ಟುಕೋ ಎಂದು ತಿಳಿಸಿದ್ದನು. ಕೊಟ್ಟ ಮಾತಿನಂತೆ ಒಂದೂವರೆ ತಿಂಗಳ ಹಿಂದೆ 1 ಪಿಸ್ತೂಲ್ ಮತ್ತು 10 ಸಜೀವ ಗುಂಡುಗಳನ್ನು ತಂದು ಕೊಟ್ಟಿದ್ದನು.

ಕೊಳ್ಳೇಗಾಲಕ್ಕೆ ತಂದಿದ್ಯಾಕೆ?

ಮೈಸೂರಿನಲ್ಲಿ ಪಿಸ್ತೂಲ್ ಮಾರಾಟವಾಗದ ಹಿನ್ನೆಲೆಯಲ್ಲಿ ಆರೋಪಿ ತೌಫಿಕ್ ಅಹಮ್ಮದ್ ಬಣ್ಣದ ಕೆಲಸ ಮಾಡುವಾಗ ಕೊಳ್ಳೇಗಾಲದಲ್ಲಿ ಪರಿಚಯವಾಗಿದ್ದ ಮಹಮ್ಮದ್ ಅರ್ಷದ್ ಮೂಲಕ ಬೇರೆಯವರಿಗೆ ಮಾರಾಟ ಮಾಡಲು ಬಂದಿದ್ದ. ಪ್ರಕರಣ ಸಂಬಂಧ ಯಳಂದೂರು ವೃತ್ತ ನಿರೀಕ್ಷಕ ಸಿಪಿಐ ಶ್ರೀಕಾಂತ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ದಾಳಿಯಲ್ಲಿ ಉಪವಿಭಾಗದ ಅಪರಾಧ ಪತ್ತೆ ದಳದ ಎಎಸ್‌ಐ ತಕೀವುಲ್ಲಾ, ಹೆಡ್‌ಕಾನ್‌ಸ್ಟೆಬಲ್ ಕಿಶೋರ್, ವೆಂಕಟೇಶ್, ಕಾನ್‌ಸ್ಟೆಬಲ್ ಬಿಳಿಗೌಡ, ಶಿವಕುಮಾರ್, ಎಂ. ರವಿ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net