

ಹುಬ್ಬಳ್ಳಿ: ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತರ ಕಚೇರಿ (ಪಿಸಿಐಟಿ) ಹುಬ್ಬಳ್ಳಿಯಲ್ಲೇ ಮುಂದುವರಿಯಲಿದೆ. ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಆ. 13ರಂದು ಪಿಸಿಐಟಿ ಹುಬ್ಬಳ್ಳಿಯನ್ನು ಪಣಜಿಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿತ್ತು. ಪಿಸಿಐಟಿ ಬೆಂಗಳೂರು-4 ಹುದ್ದೆಯನ್ನು ಗುರುವಾರ ಹುಬ್ಬಳ್ಳಿಗೆ ಸ್ಥಳಾಂತರಿಸಿ ಹೊಸ ಆದೇಶ ಹೊರಡಿಸಿದೆ. ಇದಲ್ಲದೆ, ಕೇಂದ್ರ ಸರ್ಕಾರದ ಹೊಸ ತೆರಿಗೆ ನೀತಿಯ ಭಾಗವಾಗಿರುವ ಮುಖರಹಿತ ಮೌಲ್ಯಮಾಪನ ಪ್ರಕ್ರಿಯೆಯಡಿ ಹೊಸ ಪ್ರಾದೇಶಿಕ ಇ-ಮೌಲ್ಯಮಾಪನ ಕೇಂದ್ರವನ್ನು ಕೂಡ ಹುಬ್ಬಳ್ಳಿಯಲ್ಲಿ ಸ್ಥಾಪಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ ಎಂದು ಸ್ಥಳೀಯರಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಕಟಣೆಯೊಂದಿಗೆ ಆದೇಶ ಪ್ರತಿಯನ್ನು ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯದ ಅಧೀನದ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಟಿಡಿ) ಯು ಆದಾಯ ತೆರಿಗೆ ಇಲಾಖೆಯ ಅಧಿಕಾರ ವ್ಯಾಪ್ತಿಯನ್ನು ಪುನರ್ ರಚನೆ ಮಾಡಿ ಹುಬ್ಬಳ್ಳಿಯ ಪಿಸಿಐಟಿ ಯನ್ನು ಗೋವಾದ ಪಣಜಿಗೆ ಸ್ಥಳಾಂತರಿಸಲಾಗಿತ್ತು. ಈ ಬಗ್ಗೆ ಉತ್ತರ ಕರ್ನಾಟಕ ಭಾಗದ ತೆರಿಗೆ ಸಲಹೆಗಾರರು, ವರ್ತಕರು, ವಾಣಿಜ್ಯೋದ್ಯಮಿಗಳು, ಲೆಕ್ಕ ಪರಿಶೋಧಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ವಿಜಯವಾಣಿ ಅಭಿಯಾನ ನಡೆಸಿತ್ತು.
ಹುಬ್ಬಳ್ಳಿಯ ಪಿಸಿಐಟಿ ಕಚೇರಿಯು ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ, ಬಳ್ಳಾರಿ, ಗದಗ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಬಾಗಲಕೋಟ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಪ್ರಧಾನ ಆಯುಕ್ತರ ಸಮ್ಮುಖದಲ್ಲಿ ಇತ್ಯರ್ಥವಾಗಬೇಕಾದ ಮೇಲ್ಮನವಿ, ವಿಚಾರಣೆಗೆ ಸಂಬಂಧಿಸಿದಂತೆ ತೆರಿಗೆದಾರರು, ವಾಣಿಜ್ಯೋದ್ಯಮಿಗಳು, ವರ್ತಕರು ಪಣಜಿಗೆ ಹೋಗಬೇಕಾದ ಪರಿಸ್ಥಿತಿ ನಿರ್ವಣವಾಗಿತ್ತು. ಈ ಸಮಸ್ಯೆಯನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ)ಯು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಗಮನಕ್ಕೆ ತಂದಿತ್ತು.
ಆದಾಯ ತೆರಿಗೆ ಪ್ರಧಾನ ಆಯುಕ್ತರ (ಪಿಸಿಐಟಿ) ಕಚೇರಿಯನ್ನು ಹುಬ್ಬಳ್ಳಿಯಲ್ಲೇ ಮುಂದುವರಿಸುವ ಕೇಂದ್ರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈ ದಿಸೆಯಲ್ಲಿ ಸ್ಥಳೀಯರಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಯತ್ನ ಶ್ಲಾಘನೀಯವಾದುದು. ಉ.ಕ. ಭಾಗದ ತೆರಿಗೆ ಸಲಹೆಗಾರರು, ವಾಣಿಜ್ಯೋದ್ಯಮಿಗಳು, ವರ್ತಕರು ಸಂಘಟಿತರಾಗಿ ನಡೆಸಿದ ಪ್ರಯತ್ನದ ಫಲವು ಆಗಿದೆ. | ಡಾ.ಎನ್.ಎ. ಚರಂತಿಮಠ ಖ್ಯಾತ ಲೆಕ್ಕ ಪರಿಶೋಧಕರುಪಿಸಿಐಟಿ ಕಚೇರಿ ಪಣಜಿಗೆ ಸ್ಥಳಾಂತರವಾಗಿದ್ದರೆ ಅದರಿಂದ ಆಗುವ ತೊಂದರೆಗಳನ್ನು ‘ವಿಜಯವಾಣಿ’ ಪತ್ರಿಕೆ ಜನತೆಯ ಮುಂದೆ ತೆರೆದಿಟ್ಟಿತ್ತು. ಪತ್ರಿಕೆಯ ಅಭಿಯಾನದಿಂದ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿದೆ. ಇದು ‘ವಿಜಯವಾಣಿ’ ಪತ್ರಿಕೆಯ ಜಯ.| ಎಚ್.ಎನ್. ನಂದಕುಮಾರ ಉದ್ಯಮಿಪಿಸಿಐಟಿ ಕಚೇರಿಯನ್ನು ಹುಬ್ಬಳ್ಳಿಯಲ್ಲೇ ಮುಂದುವರಿಸುವಂತೆ ಕೆಲ ದಿನಗಳ ಹಿಂದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದೆ. ಪರಿಣಾಮ ಇಂದು ಪಿಸಿಐಟಿ ಕಚೇರಿ ಹುಬ್ಬಳ್ಳಿಯಲ್ಲಿಯೇ ಮುಂದುವರಿಸಲು ಸಮ್ಮತಿ ಸೂಚಿಸಿದ್ದಾರೆ.| ಪ್ರಲ್ಹಾದ ಜೋಶಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ