

ಚಿಕ್ಕಮಗಳೂರು: ವಿದ್ಯಾರ್ಥಿಗಳು ತಮ್ಮ ಸರ್ವಾಂಗೀಣ ಬೆಳವಣಿಗೆ ದೃಷ್ಟಿಯಿಂದ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು. ನಗರದ ಮಲೆನಾಡು ವಿದ್ಯಾಸಂಸ್ಥೆ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿ ಸಂಘ ಉದ್ಘಾಟಿಸಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪಿಯುಸಿ ಶಿಕ್ಷಣ ಬದುಕಿನ ಮಹತ್ತರ ಘಟ್ಟ. ಅಲ್ಲಿ ಯಶಸ್ವಿಯಾದರೆ ಮಾತ್ರ ಜೀವನದ ಗುರಿ ಸಾಧಿಸಲು ಸಾಧ್ಯ. ಪದವಿಪೂರ್ವ ಶಿಕ್ಷಣದ ವೇಳೆ ಗುರಿ ಸಾಧಿಸಲು ಸಾಕಷ್ಟು ಅವಕಾಶವಿರುತ್ತದೆ. ಅದನ್ನು ಜಾರಿಹೋಗಲು ಬಿಡದೆ ಶ್ರದ್ಧೆ, ಛಲ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು. ಪಿಯುಸಿಯಲ್ಲಿ ವಿಫಲರಾದರೆ ಅಷ್ಟೂ ವರ್ಷದ ಸಾಧನೆ ಮತ್ತು ಪ್ರಯತ್ನ ವಿಫಲವಾಗುತ್ತದೆ. ಹೀರೊ ಆಗಬಯಸಿದ್ದ ನೀವು ಜೀರೊ ಆಗುತ್ತೀರಿ ಎಂದರು.
ವಿದ್ಯಾರ್ಥಿಗಳು ಆಸೆ, ಕನಸು ಮತ್ತು ಗುರಿಯನ್ನು ಹೊಂದಿರಬೇಕು. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರಬೇಕು. ನಕಾರಾತ್ಮಕ ಚಿಂತನೆಗಳನ್ನು ಬಿಡಬೇಕು. ನನ್ನಿಂದ ಅಸಾಧ್ಯ ಎಂಬ ಭಾವನೆಯನ್ನು ಬಿಟ್ಟು ನನ್ನಿಂದ ಎಲ್ಲವೂ ಸಾಧ್ಯ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯಕುಮಾರ್ ಮಾತನಾಡಿ, ನಮ್ಮ ಅಭಿವೃದ್ಧಿ ಮತ್ತು ಏಳಿಗೆ ನಮ್ಮ ಕೈಯಲ್ಲೇ ಇದೆ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದರು.