ಪಿಯುಸಿ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಕಡಿಮೆ

kdr sports
ಕಡೂರಿಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಶಾಸಕ ಕೆ.ಎಸ್.ಆನಂದ್, ಭಂಡಾರಿ ಶ್ರೀನಿವಾಸ್, ಈರಳ್ಳಿ ರಮೇಶ್ ಉದ್ಘಾಟಿಸಿದರು. ತವರಾಜ್, ಎಂ.ರಫೀಕ್, ನಾಗರಾಜಪ್ಪ, ಮುರಳೀಧರ್ ಮತ್ತಿತರರಿದ್ದರು.
Published on

ಕಡೂರು: ಪ್ರೌಢಶಾಲಾ ಮಕ್ಕಳಿಗಿಂತ ಪಿಯು ವಿಭಾಗದ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಕಡಿಮೆಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಕಳವಳ ವ್ಯಕ್ತಪಡಿಸಿದರು.

ಶನಿವಾರ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಆತಿಥ್ಯದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ಆದರೆ ಅನಿವಾರ್ಯವಾಗಿ ಪಿಯು ಮಕ್ಕಳು ಕಲಿಕೆಗೆ ಹೆಚ್ಚಿನ ಒತ್ತು ನೀಡಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದ್ದು ಇದನ್ನು ಹೋಗಲಾಡಿಸಬೇಕು ಎಂದು ಹೇಳಿದರು.

ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಅಂದಾಜು 4 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರದ ಹಂತದಲ್ಲಿ ಕೇಳಿದ್ದು, ಹಣ ತಂದು ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕ್ರೀಡಾಂಗಣಕ್ಕೆ ಸಂಪೂರ್ಣ ವಿದ್ಯುತ್‌ದೀಪ ಅಳವಡಿಸಿಕೊಡಲಾಗಿದೆ. ಮುಂದೆಯೂ ಇದರ ಅಭಿವೃದ್ಧಿಗೆ ಕೈಜೋಡಿಸಲಾಗುವುದು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಸಿ.ರಮೇಶ್ ಮಾತನಾಡಿ, ಉತ್ತಮವಾಗಿ ಆಟವಾಡಿ ಅಂತಾರಾಜ್ಯ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದೆ ಎಂದರು.

ಕಡೂರು ವೃತ್ತ ನಿರೀಕ್ಷಕ ಎಂ.ರಫೀಕ್ ಕ್ರೀಡಾಜ್ಯೋತಿ ಸ್ವೀಕರಿಸಿದರು. ಪ್ರಾಚಾರ್ಯ ಡಾ. ತವರಾಜ್, ಉಪಾನ್ಯಸಕ ಹನುಮಂತಪ್ಪ, ಕೆ.ನಾಗರಾಜಪ್ಪ, ಪಾಂಡುಕುಮಾರ್, ಆನಂದಪ್ಪ, ಕೆ.ಟಿ.ಲತಾಮಣಿ, ನಾಗರಾಜಪ್ಪ, ಮುರಳೀಧರ್, ನಂಜುಂಡಸ್ವಾಮಿ, ಕೆ.ಜಿ.ಶ್ರೀನಿವಾಸಮೂರ್ತಿ, ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net