

ಸಿಂಧನೂರು: ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ದಾಖಲಿಸಿರುವುದನ್ನು ವಿರೋಧಿಸಿ ವಕ್ಫ್ ಸಂತ್ರಸ್ತರ ಹೋರಾಟ ಸಮಿತಿಯಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅರುಣ್ ದೇಸಾಯಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ತಲೆಮಾರುಗಳ ಹಿಂದಿನಿಂದ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಗಳಾಗಿದ್ದು, ಕಂದಾಯ ಇಲಾಖೆ ನಿಯಮಗಳ ಪ್ರಕಾರ ಪಹಣಿ, ಮುಟೇಷನ್, ಇಸಿ (ಋಣಬಾರ ಪ್ರಮಾಣಪತ್ರ) ಸಮರ್ಪಕವಾಗಿವೆ. ಇಂತ ಜಮೀನನ್ನು ಯಾವುದೇ ಮಾಹಿತಿ ನೀಡದೆ ವಕ್ಫ್ ಎಂದು ನಮೂದಿಸುವುದು ಸರಿಯಲ್ಲ. ತಲತಲಾಂತರದಿಂದ ಉಳಿಮೆ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಅಸಂವಿಧಾನಿಕವಾಗಿದ್ದು ಇದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
1974ರ ಭೂ ಸುಧಾರಣಾ ಕಾಯ್ದೆಗಳಿಗೆ ವ್ಯತಿರಿಕ್ತವಾಗಿ ವಕ್ಫ್ ಮಂಡಳಿ ನಡೆದುಕೊಳ್ಳಬಾರದು. 2017-18ರಲ್ಲಿ ವಕ್ಫ್ ಮಂಡಳಿ ಆದೇಶಿಸಿರುವ ಹಾಗೂ ನಮಗೆ ತಲುಪದ ನೋಟಿಸ್ ಹಿಂಪಡೆಯಬೇಕು. ಈಗಾಗಲೆ ದಾಖಲಾತಿಗಳಲ್ಲಿ ಸೇರಿಸಿರುವ ವಕ್ಫ್ ಹೆಸರನ್ನು ತೆಗೆದು ಹಾಕಿ ರೈತರನ್ನು ನೆಮ್ಮದಿಯಾಗಿ ಬದುಕಲು ಬಿಡಬೇಕೆಂದು ಒತ್ತಾಯಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಪ್ರಮುಖರಾದ ಬಸವರಾಜ ವಳಕಲದಿನ್ನಿ, ವೀರೇಶ ಯಡಿಯೂರಮಠ, ಅಮರಯ್ಯಸ್ವಾಮಿ ಅಲಬನೂರು, ವೀರೇಶ ನಾಡಗೌಡ, ಸಂಗ್ರಾಮ್ ಕಿಲ್ಲೇದ್, ನಿರುಪಾದೆಪ್ಪ ಜೋಳದರಾಶಿ, ಮಲ್ಲಿಕಾರ್ಜುನ ಜೀನೂರು, ಮಲ್ಲಪ್ಪ, ಎಸ್.ಎಸ್.ಹಿರೇಮಠ, ತಿಮಾರಡ್ಡಿ, ಜಿಪಂ ಮಾಜಿ ಸದಸ್ಯ ಶಿವನಗೌಡ ಎಲೆಕೂಡ್ಲಿಗಿ, ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಅಜಯಕುಮಾರ ವಕೀಲ, ಮಾಳಪ್ಪ ಬರಸಿ, ಮೂರ್ತಿ ದೇವಿಕ್ಯಾಂಪ್, ಕೃಷ್ಣಮೂರ್ತಿ, ದಿಲೀಪಕುಮಾರ ಸಕಲೇಚಾ, ತಾಪಂ ಮಾಜಿ ಸದಸ್ಯ ಉದಯಗೌಡ, ಸಿರಾಜ್ ಪಾಷಾ, ಸತ್ಯನಗೌಡ ಒಳಬಳ್ಳಾರಿ, ಬಸವರಾಜಸ್ವಾಮಿ ಹಿರೇಮಠ, ಶ್ಯಾಂಸುಂದರ ಕೀರ್ತಿ, ರವಿ ಹಿರೇಮಠ ಇದ್ದರು.