

ಕಿಕ್ಕೇರಿ: ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಪಿತೃಪಕ್ಷ ಆಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಕುರಿ, ಮೇಕೆಗಳ ಖರೀದಿ ಭರಾಟೆ ಕಂಡುಬಂತು.
ಸುಮಾರು 500 ಮನೆಗಳಿರುವ ಗ್ರಾಮದಲ್ಲಿ ಹೋಬಳಿಯಲ್ಲಿಯೇ ಕೊನೆಯದಾಗಿ ಇಲ್ಲಿ ಪಿತೃಪಕ್ಷ ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಡೀ ಊರಲ್ಲಿ ಸಂಭ್ರಮ ಮನೆಮಾಡಿತ್ತು. ಪ್ರತಿ ಮನೆಗೆ ಕನಿಷ್ಠ ಒಂದು ಅಥವಾ ಎರಡು ಮೇಕೆ, ಕುರಿಗಳನ್ನು ಖರೀದಿಸಿ ಹಬ್ಬಕ್ಕೆ ಮಾಂಸದ ಅಡುಗೆ ಮಾಡುವುದು ವಾಡಿಕೆ.
ಸುಮಾರು 800 ಕುರಿ-ಮೇಕೆಗಳನ್ನು ಹಬ್ಬಕ್ಕೆ ಬಳಸಲಾಯಿತು. ಹಲವರು ಕುರಿಗಳನ್ನು ಹಬ್ಬಕ್ಕೆ ಸಾಕಿಕೊಂಡಿದ್ದರೆ, ಕೆಲವರು ಕುರಿಗಳನ್ನು ಶ್ರವಣಬೆಳಗೊಳ, ಚನ್ನರಾಯಪಟ್ಟಣ ಮತ್ತಿತರ ಪ್ರದೇಶಗಳಿಂದ ಖರೀದಿಸಿ ತಂದಿದ್ದರು. ಗ್ರಾಮಸ್ಥರು ಗುಡ್ಡೆಬಾಡು ಕೂಡ ಮಾಡಿ ಪರಸ್ಪರ ಮಾಂಸವನ್ನು ಹಬ್ಬಕ್ಕೆ ಹಂಚಿಕೊಂಡರು.
ಪ್ರತಿ ಮನೆಗಳಲ್ಲೂ ಪಿತೃಗಳ ಫೋಟೋ, ಕಳಶವಿಟ್ಟು ಪೂಜಿಸಿದರು. ಮಾಂಸದ ಅಡುಗೆಯನ್ನು ಹಿರಿಯರಿಗೆ ನೈವೇದ್ಯವಾಗಿ ಅರ್ಪಿಸಿ ಬಂದ ನೆಂಟರಿಷ್ಟರಿಗೆ ಮಾಂಸದೂಟದ ಆತಿಥ್ಯ ನೀಡಿದರು.