ಪಿತೃ ಪಕ್ಷ ಹಿನ್ನೆಲೆ:ಖರೀದಿಗೆ ಮುಗಿಬಿದ್ದ ಜನ

ಪಿತೃ ಪಕ್ಷ ಹಿನ್ನೆಲೆ:ಖರೀದಿಗೆ ಮುಗಿಬಿದ್ದ ಜನ
Published on

 ಹಾಸನ: ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ಶನಿವಾರ ಜಿಲ್ಲೆಯ ಹಲವು ಕಡೆಗಳಲ್ಲಿ ಪಿರ್ತೃ ಪಕ್ಷ ಆಚರಣೆಗೆ ನಗರ ಹಾಗೂ ಜಿಲ್ಲೆಯಲ್ಲಿ ಮಟನ್, ಚಿಕನ್ ಹಾಗೂ ಮೀನಿಗೆ ಬಹು ಬೇಡಿಕೆ ಬಂದಿದೆ.

ಬಹುತೇಕ ಕಡೆಗಳಲ್ಲಿ ಚಿಕನ್, ಮಟನ್ ಹಾಗೂ ಮೀನು ಮಾರಾಟ ಅಂಗಡಿಗಳ ಮುಂದೆ ಜನಸಂದಣಿ ಜೋರಾಗಿತ್ತು.ನಗರದ ಸಂತೇಪೇಟೆ ಬಳಿ ಇರುವ ಚಿಕನ್, ಮಟನ್ ಮಾರುಕಟ್ಟೆಯಲ್ಲಿ ಬೆಳಗ್ಗಿನಿಂದಲೇ ಹಬ್ಬಕ್ಕೆ ಬೇಕಾದ ಮಟನ್, ಚಿಕನ್ ಹಾಗೂ ಖದೀರಿ ಮಾಡಲು ಜನರು ಮುಗಿ ಬಿದ್ದಿದ್ದರು.

ಚಿಕನ್ ಒಂದು ಕೆಜಿಗೆ 150 ರಿಂದ 170 ವರೆಗೂ ಇದ್ದರೆ, ಮಟನ್ ಒಂದು ಕೆಜಿಗೆ 600 ರಿಂದ 850 ವರೆಗೂ ಇರುವುದು ಕಂಡು ಬಂತು. ಆದರೆ ಹಬ್ಬ ಮಾಡಲೇ ಬೇಕಾದವರು, ಬೆಲೆಯನ್ನೂ ಲೆಕ್ಕಿಸದೆ ಸಾರ್ವಜನಿಕರು ಮಾಂಸ ಖರೀದಿಯಲ್ಲಿ ತೊಡಗಿದ್ದರು.

ಹಿನ್ನಲೆ: ಮಹಾಲಯ ಅಮಾವಾಸ್ಯೆ ಅಥವಾ ಸರ್ವ ಪಿತೃ ಅಮಾವಾಸ್ಯೆ ಕೊನೆಯ ದಿನ. ಆ ದಿನವನ್ನು ಅತ್ಯಂತ ಪ್ರಮುಖ ಮತ್ತು ಪವಿತ್ರ ಎಂದು ಪರಿಗಣಿಸಲಾಗುತ್ತದೆ.

ಪಿತೃ ಪಕ್ಷ ಸಮಯದಲ್ಲಿ ಶ್ರಾದ್ಧವನ್ನು ಮಾಡಿದಲ್ಲಿ ಪೂರ್ವಜರ ಆತ್ಮ ಸ್ವರ್ಗಕ್ಕೆ ಹೋಗುತ್ತದೆ ಎಂದು ನಂಬಲಾಗಿದೆ. ಭರಣಿ ನಕ್ಷತ್ರ, ಪಂಚಮಿಯಂದು ಯಾವುದೇ ಪ್ರತಿಬಂಧ ಇರುವುದಿಲ್ಲ. ಸರ್ವಪಿತೃ ಅಮಾವಾಸ್ಯೆಯ ದಿನದಂದು ತಿಥಿಯನ್ನು ಮಾಡಲಾಗದೆ ಹೋದವರು ಶ್ರಾದ್ಧವನ್ನು ಮಾಡಬಹುದು ಎಂದು ಧರ್ಮಗ್ರಂಥಗಳಲ್ಲಿ ತಿಳಿಸಿದೆ.

ಪಿತೃ ಪಕ್ಷದಲ್ಲಿ ಅನೇಕರು ಮಾಂಸಾಹಾರಿ ಮಾಡಿದರೆ, ಇನ್ನೂ ಕೆಲವರು ಸಸ್ಯಹಾರಿ ಅಡುಗೆ ಮಾಡಿ ಮನೆಯವರು ಹಾಗೂ ನೆಂಟರಿಷ್ಟರಿಗೆ ಬಡಿಸುತ್ತಾರೆ. ಈ ವೇಳೆ ಅತಿಥಿಯಾಗಿ ಬಂಧು ಬಳಗ, ಸ್ನೇಹಿತರನ್ನು ಮನೆಗೆ ಊಟಕ್ಕೆ ಕರೆದು ಅವರಿಗೆ ಸಂತೃಪ್ತಿಪಡಿಸುವುದು ರೂಢಿಯಲ್ಲಿದೆ. ಇದರಿಂದ ಹಿರಿಯರಿಗೆ ಶಾಂತಿ ಸಿಗುತ್ತದೆ ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ನಂಬಿಕೆ. ಅದರಂತೆಯೇ ಅನೇಕ ಕಡೆಗಳಲ್ಲಿ ಪಿತೃಪಕ್ಷದ ಆಚರಣೆ ನಡೆದುಕೊಂಡು ಬರುತ್ತಿದೆ.

ಮಾಂಸ ಮಾರಾಟ ಭರಾಟೆ ಜೋರು:

ಮಾಂಸಕ್ಕೆ ಮುಗಿ ಬೀಳುವುದು ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಭಾಗಗಳಲ್ಲೂ ಮಾಂಸ ಖರೀದಿ ಹಾಗೂ ಮಾರಾಟ ಭರಾಟೆ ಜೋರಾಗಿದೆ. ಕೆಲವು ಕಡೆಗಳಲ್ಲಿ ಹಳ್ಳಿಗಳಿಗೇ ಆಟೋ ಇಲ್ಲವೇ ವಾಹನಗಳಲ್ಲಿ ಆಡು, ಕುರಿ, ಕೋಳಿಗಳನ್ನು ತಂದು ಅಲ್ಲೇ ರೆಡಿ ಮಾಡುವ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಸನ್ನಿವೇಶ ಅನೇಕ ಕಡೆಗಳಲ್ಲಿ ಮುಂದುವರಿದಿದೆ.ಇಷ್ಟಾದರೂ ಬೇಕಾದಷ್ಟು ಮಾಂಸ ಪೂರೈಕೆ ಮಾಡುವುದು ಕಷ್ಟವಾಗುತ್ತಿದ್ದು, ಜನರು ಕಾಯುವ ಸನ್ನಿವೇಶ ಬಹುತೇಕ ಕಡೆಗಳಲ್ಲಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net