

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಪ್ತಿಯಲ್ಲಿ ಬರುವ ಹರವೆ, ಕುಲಗಾಣ, ಗೋವಿಂದವಾಡಿ, ಮಲೆಯೂರು, ಮುಕ್ಕಡಹಳ್ಳಿ ಹಾಗೂ ಸಾಗಡೆ ಗ್ರಾಮ ಪಂಚಾಯಿತಿಯ ಗ್ರಾಮ ಅಭಿವೃದ್ಧಿ (ಪಿಡಿಓ) ಅಧಿಕಾರಿಗಳು ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಎಂದು ಶಾಸಕ ಗಣೇಶ್‌ಪ್ರಸಾದ್ ಸೂಚನೆ ನೀಡಿದರು.
ನಗರದ ಸತ್ತಿರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 6 ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರು ಶೇ.80 ರಷ್ಟು ಸಮಸ್ಯೆಗಳು ಪಿಡಿಓ ಅವರಿಂದಲೇ ಪರಿಹಾರವಾಗುತ್ತದೆ ಎಂದು ಭಾವಿಸಿರುತ್ತಾರೆ. ಕಾನೂನಾತ್ಮಕವಾಗಿ ಹಾಗೂ ಗ್ರಾ.ಪಂ ಅಜೆಂಡಾದ ವ್ಯಾಪ್ತಿಯಲ್ಲಿ ಆಗುವಂತಹ ಕೆಲಸಗಳನ್ನು ಸೂಕ್ತ ಸಮಯಕ್ಕೆ ಮಾಡಿಕೊಡಿ. ನರೇಗಾ ಯೋಜನೆಯಡಿ ಶಾಲಾ ಕಟ್ಟಡಗಳು, ಕಾಂಪೌಂಡ್, ಶೌಚಾಲಯ, ಅಡುಗೆಮನೆ ನಿರ್ಮಾಣ ಹಾಗೂ ಆಟದ ಮೈದಾನಗಳನ್ನು ಅಭಿವೃದ್ಧಿಗೊಳಿಸಲು ಮುಂದಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ತೆರಿಗೆ ಸಂಗ್ರಹಕ್ಕೆ ಗಮನಹರಿಸಿ ಎಂದು ಸಲಹೆ ನೀಡಿದರು.
ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ:
6 ಗ್ರಾ.ಪಂ ವ್ಯಪ್ತಿಯಲ್ಲಿ ನಡೆಯುತ್ತಿರುವ ಜೆಜೆಎಂ ಕುಡಿಯುವ ನೀರು ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಕಾಮಗಾರಿ ಮುಗಿದ ಗ್ರಾಮಗಳಲ್ಲಿ ಪಿಡಿಓಗಳಿಗೆ ಹಸ್ತಾಂತರಿಸಬೇಕು. ಕಾಮಗಾರಿ ಮಾಡುವ ಸಂದರ್ಭದಲ್ಲಿ ಹಾಳಾಗಿರುವ ರಸ್ತೆ ಹಾಗೂ ಚರಂಡಿಗಳನ್ನು ದುರಸ್ಥಿಗೊಳಿಸಿ ಎಂದು ತಾಕೀತು ಮಾಡಿದರು. ಅಧಿಕಾರಿಗಳು ಪ್ರತಿಕ್ರಿಯಿಸಿ, ಹೆಗ್ಗವಾಡಿ ಬಸ್ ನಿಲ್ದಾಣ ಹಾಗೂ ಮುಕ್ಕಡಹಳ್ಳಿಯಲ್ಲಿ 2 ಟ್ಯಾಂಕ್ ನಿರ್ಮಾಣಕ್ಕೆ ಜಾಗ ನಿಗದಿಯಾಗಬೇಕು. ಹಲವು ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಮುಕ್ತಾಯವಾಗಿದೆ. ಕೆಲವೆಡೆ ಟ್ಯಾಂಕ್ ನಿರ್ಮಾಣಕ್ಕೆ ತೊಂಡಕು ಉಂಟಾಗಿದೆ. ಎಲ್ಲಾಸಮಸ್ಯೆಗಳನ್ನು ಹಂರಹಂತವಾಗಿ ಬಗೆಹರಿಸಿಕೊಂಡು, ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಭವನ, ರಸ್ತೆ, ಚರಂಡಿ ಕಾಮಗಾರಿಗೆ ಒತ್ತು:
ಆರು ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್ಲಿ ರಸ್ತೆ, ಚರಂಡಿಗಳ ಕಾಮಗಾರಿ ಆಗಬೇಕಿದೆ ಅದನ್ನು ತಿಳಿಸಿ, ಹಾಗೆಯೇ ಅರ್ಧಕ್ಕೆ ನಿಂತಿರುವ ವಿವಿಧ ಭವನಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅನುದಾನ ಕೊರತೆ ಇರುವ ಕಡೆಗಳಲ್ಲಿ ಅನುದಾನ ನೀಡಲಾಗುವುದು. ಮಲೆಯೂರು ಉಪ್ಪಾರ ಸಮುದಾಯ ಭವನದ ಕುರಿತು ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದ್ದಾರೆ. ಅದರ ಸಮಸ್ಯೆಯನ್ನು ಬಗೆಹರಿಸಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಎಂದರು. ನಿರ್ಮಿತಿ ಕೇಂದ್ರದ ಇಂಜಿನಿಯರ್ ಪ್ರತಿಕ್ರಿಯಿಸಿ, ಹಲವಾರು ಗ್ರಾಮಗಳ ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗೆ ಅನುದಾನ ಬಂದಿದೆ, ಅವುಗಳ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಕೆಲವು ಗ್ರಾಮಗಳು ಬಸವ ಸಮುದಾಯ ಭವನದ ಕಾಮಗಾರಿಗೆ ಅರ್ಧದಷ್ಟು ಹಣ ಬಿಡುಗಡೆಯಾಗಿದೆ. ಇನ್ನು ಕಲೆವು ಸಮುದಾಯ ಭವನಗಳಿಗೆ ಅನುದಾನ ಬಿಡುಗಡೆಯಾದರೇ ಕಾಮಗಾರಿಗಳನ್ನು ಆದಷ್ಟು ಬೇಗ ಮುಕ್ತಾಯಗೊಳಿಸುತ್ತೇವೆ ಎಂದರು.
ಶಾಲಾ ಸಮಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಿ:
ಕೋವಿಡ್ ನಂತರದಲ್ಲಿ ಹಲವಾರು ಗ್ರಾಮೀಣ ಪ್ರದೇಶಗಳಿಗೆ ಹೊಗುತ್ತಿದ್ದ ಸಾರಿಗೆ ಸೇವೆಯನ್ನು ನಿಲ್ಲಿಸಲಾಗಿದೆ ಅದನ್ನು ಆದಷ್ಟು ಪುನರಾರಂಭಿಸಬೇಕು. ಶಾಲಾ-ಕಾಲೇಜು ಸಮಯಕ್ಕೆ ಹೆಚ್ಚಿನ ಸಾರಿಗೆ ಬಸ್ ಒದಗಿಸಿದರೇ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಮೂಡ್ನಕೂಡು, ಸಾಗಡೆ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಪದೇ ಪದೇ ಸಾರಿಗೆ ಬಸ್ ಸಮಸ್ಯೆಗಳು ಕೇಳಿಬರುತ್ತದೆ. ಈ ಸಮಸ್ಯೆಯನ್ನು ಸಾರಿಗೆ ಇಲಾಖೆ ಬಗೆಹರಿಸಬೇಕು ಎಂದು ಸೂಚಿಸಿದರು. ನಿರಂತರ ಮಳೆಯಿಂದಾಗಿ ಹಲವಾರು ಶಾಲಾ ಕಟ್ಟಡಗಳು ಸೋರುತ್ತಿದೆ ಇದನ್ನು ದುರಸ್ಥಿಗೊಳಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು. ಬಿಇಓ ಹನುಮ ಶೆಟ್ಟಿ ಪ್ರತಿಕ್ರಿಯಿಸಿ, ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಹಳೇಪುರ, ಮಲೆಯೂರು, ಮುಕ್ಕಡಹಳ್ಳಿ ಹಾಗೂ ಇನ್ನಿತರೆ ಶಾಲೆಗಳಲ್ಲಿ 6 ಕಟ್ಟಡಗಳು ಸೋರುತ್ತಿದೆ. ಅನುದಾನ ಬಿಡುಗಡೆಯಾದ ಬಳಿಕ ದುರಸ್ಥಿಕಾರ್ಯ ಮಾಡಲಾಗುತ್ತದೆ. ಕುಲಗಾಣ ಗ್ರಾಮದಲ್ಲಿ ಹೊಸ ಕೊಠಡಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.