ಪಿಡಿಒಗಳಿಲ್ಲದೆ ಜನರ ಪರದಾಟ : 8 ಪಂಚಾಯಿತಿಗಳಲ್ಲಿ ಕೇವಲ 4 ಜನ ಕಾರ್ಯನಿರ್ವಹಣೆ

IMG-20221221-WA0052
Published on

ಗುಡಿಬಂಡೆ: ಸಕಾಲಕ್ಕೆ ಸರಿಯಾಗಿ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಪಿಡಿಒಗಳು ಇಲ್ಲದೇ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.
ತಾಲೂಕಿನ 8 ಗ್ರಾಮ ಪಂಚಾಯಿತಿಗಳಿಗೆ ಮತ್ತು ತಾಲೂಕು ಪಂಚಾಯಿತಿ ವ್ಯವಸ್ಥಾಪಕರ ಹುದ್ದೆಗೆ ಕೇವಲ 4 ಜನ ಪಿಡಿಒಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಕೆಲಸಗಳು ಸರಿಯಾಗಿ ಆಗದೇ ಪರದಾಡುವ ಸ್ಥಿತಿ ಎದುರಾಗಿದ್ದು, ಅಧಿಕಾರಿಗಳು ವಿರುದ್ಧ ಶಾಪ ಹಾಕುತ್ತಿದ್ದಾರೆ.
ಇತ್ತೀಚಿಗೆ ತಾಲೂಕಿನ 3 ಪಿಡಿಒಗಳು ಅಮಾನತು ಆಗಿದ್ದು, ತಾಲೂಕಿನಲ್ಲಿರುವ 4 ಜನ ಪಿಡಿಒಗಳು 8 ಗ್ರಾಪಂ ಹಾಗೂ ತಾಪಂ ವ್ಯವಸ್ಥಾಪಕರ ಹುದ್ದೆಯನ್ನು ನಿರ್ವಹಿಸಬೇಕಾಗಿದೆ. ಕೆಲಸದ ಒತ್ತಡದಲ್ಲೂ ಸಹ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ಮೇಲಧಿಕಾರಿಗಳು ಖಾಲಿ ಇರುವ ಹುದ್ದೆಗಳಿಗೆ ಪಿಡಿಒಗಳನ್ನು ನೇಮಕ ಮಾಡುವಂತೆ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ಹೆಚ್ಚಾದ ಲಂಚಾವತಾರ

ತಾಲೂಕಿನ ಪ್ರತಿ ಗ್ರಾಪಂನಲ್ಲೂ ಸಹ ಲಂಚಾವತರ ಹೆಚ್ಚಾಗಿದ್ದು, ಇತ್ತೀಚೆಗೆ ಅನೇಕ ಪಿಡಿಒಗಳು ಸಾರ್ವಜನಿಕರಿಂದ ಹಣ ಕೀಳುತ್ತಿದ್ದಾರೆ. ಹಣ ನೀಡದೆ ಯಾವುದೇ ಕೆಲಸ ಕಾರ್ಯ ಆಗುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದರು ಸಹ ಪ್ರಯೋಜನೆ ಆಗುತ್ತಿಲ್ಲ. ಲೋಕಾಯುಕ್ತ ಬಲೆಗೆ ಸಿಲುಕಿ ಅಮಾನತು ಆಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಇನ್ನಾದರೂ ಮೇಲಧಿಕಾರಿಗಳು ಪಿಡಿಒಗಳ ಮೇಲೆ ಶಿಸ್ತು ಕ್ರಮ ಜರುಗಿ ಸಬೇಕು ಎಂದು ತಾಲೂಕಿನ ಜನತೆ ಒತ್ತಾಯಿಸುತ್ತಿದ್ದಾರೆ.

ನೆಪ ಹೇಳಿಕೆ

ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಗ್ರಾಪಂ ಬಳಿ ಹೋದರೆ ನಾನು ಈಗ ಬೇರೆ ಗ್ರಾಪಂನಲ್ಲಿ ಇದ್ದೇನೆ. ನಾಳೆ ಬರುತ್ತೇನೆ, ಒನ್ನೊಂದು ದಿನ ಬರುತ್ತೇನೆಂದು ಸಬೂಬು ಹೇಳುತ್ತಾ ಪಿಡಿಒಗಳು ತಪ್ಪಿಸಿಕೊಳ್ಳುತ್ತಿದ್ದು, ಪ್ರತಿನಿತ್ಯ ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಗ್ರಾಪಂಗಳಲ್ಲಿ ಪಿಡಿಒಗಳು ಸರಿಯಾದ ಸಮಯಕ್ಕೆ ಕಚೇರಿಯಲ್ಲಿ ಸಿಗದೇ ದಿನ ನಿತ್ಯದ ಕೆಲಸಗಳಿಗೆ ತೊಂದರೆ ಆಗುತ್ತಿದೆ. ತಾಲೂಕಿನ ಎಲ್ಲ ಪಂಚಾಯಿತಿಗಳಲ್ಲೂ ಲಂಚಾವರೆ ಹೆಚ್ಚಾಗಿದೆ. ಕೂಡಲೇ ಮೇಲಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. ಶಾಸಕರು ಸಹ ಈ ಬಗ್ಗೆ ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು.

ಶ್ರೀನಿವಾಸ ಉಪ್ಪಾರಹಳ್ಳಿ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net