ಪಿಡಿಒ ರಾಜ್ಯ ಸಮಾವೇಶ ನಾಳೆ

h21- Borayya
Published on

ಹುಬ್ಬಳ್ಳಿ: ಗ್ರಾಮ ಪಂಚಾಯಿತಿಗಳ ಸಬಲೀಕರಣದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಪಾತ್ರ ಹಾಗೂ ಅವರು ಎದುರಿಸುತ್ತಿರುವ ಸವಾಲುಗಳ ಕುರಿತು ರ್ಚಚಿಸಲು ನಗರದ ಗೋಕುಲ ಗಾರ್ಡನ್​ನಲ್ಲಿ ಜ. 23ರಂದು ಬೆಳಗ್ಗೆ 11.30ಕ್ಕೆ ರಾಜ್ಯ ಮಟ್ಟದ ಸಮಾವೇಶ ಏರ್ಪಡಿಸಲಾಗಿದೆ ಎಂದು ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬೋರಯ್ಯ ಎಚ್. ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ನಾಲ್ಕು ಸಾವಿರ ಪಿಡಿಒಗಳು ಸೇರುವ ಸಮಾವೇಶವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಉಪಸ್ಥಿತರಿರುವರು ಎಂದರು.

ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿರುವ ಸಮಾವೇಶದಲ್ಲಿ ಪಿಡಿಒಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ತಜ್ಞರಿಂದ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು.

ಪಿಡಿಒಗಳನ್ನು ಕ್ಲಾಸ್ 3ಯಿಂದ ಕ್ಲಾಸ್ 2 ಅಧಿಕಾರಿಯಾಗಿ ಮೇಲ್ದರ್ಜೆಗೇರಿಸುವುದು, ತಾಪಂ ಕಾರ್ಯನಿರ್ವಾಹಕ ಹುದ್ದೆಯನ್ನು ಎಸಿ (ಉಪವಿಭಾಗಾಧಿಕಾರಿ) ಕೇಡರ್ ಎಂದು ಪರಿಗಣಿಸಿದ್ದರೂ ವೇತನದಲ್ಲಿ ತಾರತಮ್ಯವಿದ್ದು, ಅದನ್ನು ಸರಿಪಡಿಸಬೇಕು. ಪಿಡಿಒಗಳ ಮೇಲೆ ನಡೆಯುವ ಹಲ್ಲೆಗಳನ್ನು ತಡೆಯಲು ಆರೋಗ್ಯ ಸಿಬ್ಬಂದಿಯಂತೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅವಕಾಶ ನೀಡಬೇಕು. ತಮ್ಮ ಸಮಸ್ಯೆಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳಲು ಆಯೋಗ ರಚನೆ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಬಗ್ಗೆ ಸಮಾವೇಶದಲ್ಲಿ ಗಂಭೀರ ಚರ್ಚೆ ನಡೆಯಲಿದೆ ಎಂದು ಹೇಳಿದರು. ಪಿಡಿಒಗಳಿಗೆ ಗ್ರಾಪಂಗಳಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ, ಒತ್ತಡ ಅತಿಯಾಗುತ್ತಿದೆ. 2010ರಿಂದ ಇಲ್ಲಿಯವರೆಗೆ ಸುಮಾರು 800 ಪಿಡಿಒಗಳು ಒತ್ತಡ ಕಾರಣದಿಂದ ಹುದ್ದೆ ತೊರೆದಿದ್ದಾರೆ. 20ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬೋರಯ್ಯ ಒತ್ತಾಯಿಸಿದರು. ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ವಿುಕರ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿದರೆ ಬಹುತೇಕ ಈ ಯೋಜನೆಯಲ್ಲಿ ನಡೆಯುವ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ನರೇಗಾ ಯೋಜನೆ ಜಾರಿಗಾಗಿಯೇ ಗ್ರಾಪಂಗಳಲ್ಲಿ ಪ್ರತ್ಯೇಕ ಘಟಕ ಮಾಡಿ ಅಧಿಕಾರಿಯನ್ನು ನೇಮಿಸಬೇಕು ಎಂದರು. ಸಂಘದ ನಾಗರಾಜ ಬಿದರಳ್ಳಿ, ಸಂಗನಗೌಡ ಹಂದ್ರಾಳ, ಇತರರು ಗೋಷ್ಠಿಯಲ್ಲಿದ್ದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net