ಪಿಡಿಒ ಮೇಲಿನ ದೌರ್ಜನ್ಯ ತಡೆಯಲು ಒತ್ತಾಯ

19-Kalaghatagi 3a
Published on

ಕಲಘಟಗಿ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಮೇಲೆ ನಡೆಯುತ್ತಿರುವ ದೈಹಿಕ ಮತ್ತು ಮಾನಸಿಕ ಹಿಂಸೆ ತಡೆಗಟ್ಟಬೇಕು ಎಂದು ಆಗ್ರಹಿಸಿ ತಾಲೂಕು ಗ್ರಾ.ಪಂ. ಪಿಡಿಒ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಮತ್ತು ತಾ.ಪಂ. ಇಒ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದ ತಾಲೂಕಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಇತ್ತೀಚೆಗೆ ಹಳೆಯಂಗಡಿಯ ಅಭಿವೃದ್ಧಿ ಅಧಿಕಾರಿ ಮೇಲೆ ಜರುಗಿರುವ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಹಾಗೂ ತಾ.ಪಂ. ಇಒ ಎಸ್.ಎಂ. ಮೇಟಿ ಮನವಿ ಸ್ವೀಕರಿಸಿದರು. ಗ್ರಾ.ಪಂ. ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚನ್ನಬಸಪ್ಪ ಧರೆಣ್ಣವರ, ಸಂಘದ ಪದಾಧಿಕಾರಿಗಳಾದ ಮಂಜುನಾಥ ಅಂಗಡಿ, ವಿಠಲ ಕಲ್ಲಗೌಡರ, ನಾಗರಾಜ ಗಿರಿಯಪ್ಪನವರ, ನಾಗರಾಜ ಪುಡಕಲಕಟ್ಟಿ, ಸುಮಾ ನಾರಾಯಣ, ಶರಣಬಸಪ್ಪ ಜಂತಗಲ್, ನಾಗೇಶ ಶೆಟ್ಟಣ್ಣವರ, ಜಯಶ್ರೀ ಸರ್ವಿ, ರವಿ ರಾಠೋಡ, ಶಿವಾನಂದ ಶಿಬಾರಗಟ್ಟಿ, ವೆಂಕಟೇಶ ಮುರಗೋಡ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net