

ಸಾಗರ: ತಾಲೂಕಿನ ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ನಿಯೋಜನೆಗೊಂಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಂದಿರಾಜ್ಯೋತಿ ನಿಯೋಜನೆ ರದ್ದುಗೊಳಿಸುವಂತೆ ಒತ್ತಾಯಿಸಿ ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ನೇತೃತ್ವದಲ್ಲಿ ಅಧ್ಯಕ್ಷ, ಸದಸ್ಯರು ಪ್ರತಿಭಟನೆ ನಡೆಸಿದರು.
ರತ್ನಾಕರ ಹೊನಗೋಡು ಮಾತನಾಡಿ, ಇಂದಿರಾಜ್ಯೋತಿ ಆನಂದಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಗ್ರಾಪಂ ಆಡಳಿತ ಮತ್ತು ಗ್ರಾಮಸ್ಥರು ವರ್ಷಗಟ್ಟಲೆ ಪ್ರತಿಭಟನೆ ಮಾಡಿ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಡಿಒ ಪಂಚಾಯಿತಿ ಸದಸ್ಯರು, ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುತ್ತಿರಲಿಲ್ಲ. ಸರಿಯಾಗಿ ಕರ್ತವ್ಯ ನಿರ್ವಹಿಸದ, ಅಭಿವೃದ್ಧಿಪರ ಚಿಂತನೆ ಇಲ್ಲದ ಇಂದಿರಾಜ್ಯೋತಿ ಅವರನ್ನು ಯಡೇಹಳ್ಳಿ ಗ್ರಾಪಂಗೆ ನಿಯೋಜನೆ ಮಾಡಿರುವುದರ ಹಿಂದೆ ದುರುದ್ದೇಶವಿದೆ. ತಕ್ಷಣ ನಿಯೋಜನೆಯನ್ನು ರದ್ದು ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ಮಾಡುವುದಾಗಿ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣಪತಿ ಇರುವಕ್ಕಿ ಮಾತನಾಡಿ, ಯಡೇಹಳ್ಳಿ ಗ್ರಾಪಂ ಅಭಿವೃದ್ಧಿ ಸಹಿಸದೆ ಇಂದಿರಾಜ್ಯೋತಿ ಅವರಂತಹ ಕರ್ತವ್ಯಲೋಪ ಹಿನ್ನೆಲೆ ಇರುವ ಅಧಿಕಾರಿಯನ್ನು ಇಲ್ಲಿಗೆ ನಿಯೋಜನೆ ಮಾಡಲಾಗಿದೆ. ಆನಂದಪುರ ಗ್ರಾಮ ಪಂಚಾಯಿತಿಯಲ್ಲಿ ಇಂದಿರಾಜ್ಯೋತಿ ಅವರು ಪಿಡಿಒ ಆಗಿದ್ದಾಗ ಜನರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಅವರನ್ನು ನಮ್ಮ ಪಂಚಾಯಿತಿಗೆ ಯಾವುದೇ ಕಾರಣಕ್ಕೂ ನಿಯೋಜನೆ ಮಾಡಬಾರದು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ, ಮುಂದಿನ 10 ದಿನಗಳೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.